128 ಕೆ.ಜಿ. ತೂಕವಿದ್ದ ಪತ್ನಿ, ಪತಿ ಮೇಲೆ ಬಿದ್ದ ಕಾರಣ ದಂಪತಿಗಳಿಬ್ಬರೂ ಸಾವನ್ನಪ್ಪಿದ ಘಟನೆ ರಾಜ್ ಕೋಟ್ ನಲ್ಲಿ ನಡೆದಿದೆ.
ರಾಜ್ ಕೋಟ್ ನ ರಾಮ್ ಧನ್ ಸೊಸೈಟಿಯಲ್ಲಿ ದಂಪತಿಗಳು ವಾಸವಾಗಿದ್ದು, ಅವರ ಪುತ್ರ ಮಹಡಿ ಮೇಲೆ ಪತ್ನಿ ಜೊತೆ ವಾಸವಾಗಿದ್ದನೆನ್ನಲಾಗಿದೆ. ದಂಪತಿಗಳ ಪುತ್ರ ಆಶೀಶ್ ಅನಾರೋಗ್ಯದಿಂದ ಬಳಲುತ್ತಿದ್ದು, ಸೋಮವಾರ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಹಿನ್ನಲೆಯಲ್ಲಿ ಆತನ ಪತ್ನಿ ನಿಶಾ, ಕೆಳಗಿಳಿದು ಬಂದು ಮಾವ ನಟವರ್ ಲಾಲ್ ಹಾಗೂ ಅತ್ತೆ ಮಂಜುಳಾ ವಿಟ್ಲಾನಿಯವರಿಗೆ ವಿಷಯ ತಿಳಿಸಿದ್ದಾಳೆ.
ಇದರಿಂದ ಆತಂಕಗೊಂಡ ದಂಪತಿಗಳು, ಮಗನನ್ನು ನೋಡಲು ಮಹಡಿ ಮೇಲೆರಲು ಮುಂದಾಗಿದ್ದು, ಈ ಸಂದರ್ಭದಲ್ಲಿ ಆಯತಪ್ಪಿದ ಮಂಜುಳಾ ಹಿಂದೆಯೇ ಬರುತ್ತಿದ್ದ ಪತಿಯ ಮೇಲೆ ಬಿದ್ದಿದ್ದಾರೆ. ಮಂಜುಳಾ 128 ಕೆ.ಜಿ. ತೂಕವಿದ್ದು, ಇದರಿಂದಾಗಿ ನಟವರ್ ಲಾಲ್ ತೀವ್ರವಾಗಿ ಗಾಯಗೊಂಡಿದ್ದಾರೆ. ಮಂಜುಳಾ ಅವರಿಗೂ ಪೆಟ್ಟಾಗಿದ್ದು, ದಂಪತಿಗಳನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.