ಜುಲೈ ತಿಂಗಳಲ್ಲಿ ರಜಾ ದಿನಗಳು ಹಾಗೂ ಬ್ಯಾಂಕ್ ನೌಕರರ ಮುಷ್ಕರದಿಂದಾಗಿ ಒಟ್ಟು 11 ದಿನ ವಹಿವಾಟು ನಡೆಸಲು ಕಷ್ಟವಾಗುತ್ತದೆ. ಆದರೆ ಬಹುತೇಕರು ಎಟಿಎಂ ಕಾರ್ಡ್ ಹಣ ಪಡೆಯಲು ಮಾತ್ರ ಬಳಸುತ್ತಾರೆ. ಆದರೆ ಎಟಿಎಂ ನಲ್ಲಿ ಇನ್ನೂ ಹಲವು ವಿಧದ ವಹಿವಾಟುಗಳನ್ನು ನಡೆಸುವುದು ಸಾಧ್ಯವಿದ್ದು, ಬ್ಯಾಂಕ್ ರಜಾ ದಿನಗಳಲ್ಲಿ ಇದು ನೆರವಿಗೆ ಬರಲಿದೆ.
ಎಟಿಎಂ ಮೂಲಕ ಬ್ಯಾಂಕ್ ಗೆ ಭೇಟಿ ನೀಡದೆ ಮಿನಿ ಸ್ಟೇಟ್ ಮೆಂಟ್ ಪಡೆಯಬಹುದಲ್ಲದೇ ಚೆಕ್ ಪುಸ್ತಕಕ್ಕೆ ಮನವಿಯನ್ನೂ ಸಲ್ಲಿಸಬಹುದಾಗಿದೆ. ತುರ್ತು ಸಂದರ್ಭಗಳಲ್ಲಿ ಬ್ಯಾಂಕ್ ನಲ್ಲಿ ಇಟ್ಟಿರುವ ಫಿಕ್ಸೆಡ್ ಡೆಪಾಸಿಟ್ ಹಣವನ್ನೂ ಸ್ವಲ್ಪ ಪ್ರಮಾಣದಲ್ಲಿ ಪಡೆಯಬಹುದಾಗಿದ್ದು, ಆದರೆ ಇದಕ್ಕಾಗಿ ಹಣ ಡೆಪಾಸಿಟ್ ಮಾಡುವ ಸಂದರ್ಭದಲ್ಲಿ ಸೌಲಭ್ಯಕ್ಕೆ ಮನವಿ ಸಲ್ಲಿಸಬೇಕಾಗುತ್ತದೆ.
ಇನ್ಶೂರೆನ್ಸ್ ಪ್ರೀಮಿಯಂ ಕಟ್ಟುವುದು, ಪ್ರಿ ಪೇಯ್ಡ್ ಮೊಬೈಲ್ ರೀ ಚಾರ್ಜ್, ಕರೆಂಟ್ ಬಿಲ್ ಕಟ್ಟುವುದು ಸೇರಿದಂತೆ ಹಲವು ವಹಿವಾಟನ್ನೂ ಎಟಿಎಂ ಮೂಲಕ ಮಾಡಬಹುದಾಗಿದ್ದು, ಆದರೆ ಯಾವ ಬ್ಯಾಂಕಿನ ಎಟಿಎಂ ಗಳು ಈ ಸೌಲಭ್ಯ ಒದಗಿಸುತ್ತವೆ ಎಂಬುದನ್ನು ಗಮನಿಸಬೇಕಾಗುತ್ತದೆ. ಬೇರೆ ಬ್ಯಾಂಕಿನ ಖಾತೆದಾರರಿಗೂ ಹಣ ವರ್ಗಾಯಿಸಬಹುದಾಗಿದ್ದು, ಅಂತಹ ಖಾತೆದಾರರ ಎಟಿಎಂ ಪಿನ್ ನಂಬರ್ ಈ ವಹಿವಾಟಿಗೆ ಅವಶ್ಯಕವಾಗಿರುತ್ತದೆ. ಅಲ್ಲದೇ ಹಣದ ವರ್ಗಾವಣೆ ಮಿತಿ 5 ಸಾವಿರ ರೂ. ನಿಂದ 49,999 ರೂ. ಗಳವರೆಗೆ ಮಾತ್ರ ಇರುತ್ತದೆ.
ಆದರೆ ಒಂದಂಶ ನಿಮ್ಮ ನೆನಪಿನಲ್ಲಿರಲಿ. ಪ್ರತಿ ತಿಂಗಳು 8 ವಹಿವಾಟನ್ನೂ ಮಾತ್ರ ಎಟಿಎಂ ಮೂಲಕ ಉಚಿತವಾಗಿ ಮಾಡಬಹುದಾಗಿದ್ದು, ಬಳಿಕದ ಪ್ರತಿ ವಹಿವಾಟಿಗೆ 20 ರೂ. ಪ್ಲಸ್ ಸರ್ವೀಸ್ ಟ್ಯಾಕ್ಸ್ ಕಡಿತವಾಗುತ್ತದೆ. 8 ವಹಿವಾಟುಗಳ ಪೈಕಿ ಎಟಿಎಂ ಕಾರ್ಡ್ ನೀಡಿರುವ ಬ್ಯಾಂಕಿನ 5 ಹಾಗೂ ಇತರೆ ಬ್ಯಾಂಕಿನ 3 ವಹಿವಾಟುಗಳು ಉಚಿತವಾಗಿರುತ್ತವೆ.