ನವದೆಹಲಿ: ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಪ್ರತಿ 15 ದಿನಗಳಿಗೊಮ್ಮೆ ಪರಿಷ್ಕರಿಸಲಾಗುತ್ತದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ತೈಲ ಬೆಲೆ ಏರಿಳಿತ ಆಧರಿಸಿ, ತೈಲ ಕಂಪನಿಗಳು ದೇಶೀಯ ಮಾರುಕಟ್ಟೆಯಲ್ಲಿ ಬೆಲೆ ಪರಿಷ್ಕರಿಸುತ್ತವೆ.
ಜಾಗತಿಕ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯಾದ ಸಂದರ್ಭದಲ್ಲಿ, ಇಲ್ಲಿಯೂ ಬೆಲೆ ಏರಿಕೆ ಮಾಡುವ ತೈಲ ಕಂಪನಿಗಳು ಬೆಲೆ ಇಳಿಕೆಯ ಸಂದರ್ಭದಲ್ಲಿ ಮಾತ್ರ ಪೈಸೆಗಳ ಲೆಕ್ಕದಲ್ಲಿ ಇಳಿಸುತ್ತವೆ. ಕೇಂದ್ರದ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಮಣಿಯನ್, ಹಣಕಾಸು ಸಚಿವಾಲಯಕ್ಕೆ ಕಳೆದ ತಿಂಗಳು ವರದಿಯೊಂದನ್ನು ನೀಡಿದ್ದು, ಅದರಂತೆ ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಸದ್ಯಕ್ಕೆ ಕಡಿತ ಮಾಡುವ ಸಾಧ್ಯತೆ ಇಲ್ಲ ಎಂದು ಹೇಳಲಾಗಿದೆ.
ಲೀಟರ್ ಗೆ 1 ರೂ.ಅಬಕಾರಿ ಸುಂಕ ಕಡಿಮೆ ಮಾಡಿದರೆ, ಕೇಂದ್ರ ಸರ್ಕಾರದ ಮೇಲೆ ವಾರ್ಷಿಕ, ಪೆಟ್ರೋಲ್ ನಿಂದ 3,500 ಕೋಟಿ ರೂ., ಡೀಸೆಲ್ ನಿಂದ 9,000 ಕೋಟಿ ರೂ. ಹೊರೆ ಬೀಳುತ್ತದೆ. ಕಚ್ಛಾ ತೈಲದ ಬೆಲೆ ಜಾಗತಿಕ ಮಾರುಕಟ್ಟೆಯಲ್ಲಿ ಕಡಿಮೆಯಾದ ಸಂದರ್ಭದಲ್ಲಿ ಅದರ ಲಾಭ ಗ್ರಾಹಕರಿಗೆ ಸಿಗುತ್ತಿಲ್ಲ.
ಅಬಕಾರಿ ಸುಂಕವನ್ನು ಏರಿಕೆ ಮಾಡುವ ಮೂಲಕ, ಇಂಧನ ಬೆಲೆ ಯಥಾಸ್ಥಿತಿಯಲ್ಲಿಡಲಾಗಿದೆ. ಅದೇ ರೀತಿ, ಅರವಿಂದ್ ಸುಬ್ರಮಣಿಯನ್ ವರದಿಯಲ್ಲಿ, ಕಚ್ಛಾತೈಲದ ಬೆಲೆ ಬ್ಯಾರಲ್ ಗೆ 15 ಡಾಲರ್ ಏರಿಕೆ ಆದರೂ ಅಬಕಾರಿ ಸುಂಕವನ್ನು ಯಥಾಸ್ಥಿತಿಯಲ್ಲಿ ಇಡಲು ಸಲಹೆ ನೀಡಿದ್ದಾರೆ ಎನ್ನಲಾಗಿದೆ.