ನವದೆಹಲಿ: ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು, ಕೋರ್ ಕಮಿಟಿಯಲ್ಲಿ ಚರ್ಚಿಸದೇ, ಏಕಪಕ್ಷೀಯವಾಗಿ ಪದಾಧಿಕಾರಿಗಳನ್ನು ನೇಮಕ ಮಾಡಿದ್ದಾರೆ ಎಂಬುದು ಸೇರಿದಂತೆ, ವಿವಿಧ ಕಾರಣಗಳಿಂದ ಅವರ ವಿರುದ್ಧ ಪಕ್ಷದಲ್ಲಿ ಅಸಮಾಧಾನ ವ್ಯಕ್ತವಾಗಿದೆ.
ಯಡಿಯೂರಪ್ಪನವರ ಏಕಪಕ್ಷೀಯ ನಿರ್ಧಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಕೆಲ ಬಿ.ಜೆ.ಪಿ. ಮುಖಂಡರು ನವದೆಹಲಿಯಲ್ಲಿ ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ರಾಮ್ ಲಾಲ್ ಅವರೊಂದಿಗೆ ಚರ್ಚೆ ನಡೆಸಿದ್ದಾರೆ. ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ, ಶಾಸಕ ಸಿ.ಟಿ.ರವಿ, ನಿರ್ಮಲ್ ಕುಮಾರ್ ಸುರಾನಾ, ಶಿವಯೋಗಿ ಸ್ವಾಮಿ ಮೊದಲಾದವರು ದೆಹಲಿಯಲ್ಲಿ ರಾಮ್ ಲಾಲ್ ಅವರ ನಿವಾಸಕ್ಕೆ ತೆರಳಿ ಚರ್ಚೆ ನಡೆಸಿದ್ದು, ಪಕ್ಷದ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ನಿನ್ನೆ ಬೆಂಗಳೂರಿನಲ್ಲಿ ನಡೆದ ರಾಜ್ಯ ಬಿ.ಜೆ.ಪಿ. ಪದಾಧಿಕಾರಿಗಳ ಸಭೆಗೆ ಈಶ್ವರಪ್ಪ ಸೇರಿದಂತೆ ಹಲವರು ಗೈರು ಹಾಜರಾಗಿದ್ದರು. ಇದಕ್ಕೆ ಖಾರವಾಗಿಯೇ ಪ್ರತಿಕ್ರಿಯೆ ನೀಡಿದ್ದ ಯಡಿಯೂರಪ್ಪ, ಪಕ್ಷದಲ್ಲಿ ಭಿನ್ನಮತ ಸಹಿಸುವುದಿಲ್ಲ. ಎಷ್ಟೇ ದೊಡ್ಡವರಾಗಿದ್ದರೂ ಕ್ರಮಕೈಗೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದ್ದರು. ಇದಾದ ಬಳಿಕ ದೆಹಲಿಯಲ್ಲಿ ಇಂದು ಈಶ್ವರಪ್ಪ ನೇತೃತ್ವದಲ್ಲಿ, ವರಿಷ್ಠರಿಗೆ ಪಕ್ಷದ ಬೆಳವಣಿಗೆಗಳ ಮಾಹಿತಿ ನೀಡಿದ್ದು, ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮಧ್ಯಪ್ರವೇಶಕ್ಕೆ ಮನವಿ ಮಾಡಲಾಗಿದೆ ಎಂದು ಹೇಳಲಾಗಿದೆ.