ಗದಗ: ವ್ಯವಹಾರದಲ್ಲಿ ನಷ್ಟ ಹೊಂದಿದ ವ್ಯಕ್ತಿಯೊಬ್ಬ ಹಣ ತರುವಂತೆ ಪತ್ನಿಗೆ ಪೀಡಿಸಿದ ಘಟನೆ ನಡೆದಿದೆ. ಹಣ ಸಂಪಾದನೆಗೆ ಸ್ನೇಹಿತರೊಂದಿಗೆ ಮಲಗುವಂತೆ ತನ್ನ ಪತಿ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿ ಮಹಿಳೆಯೊಬ್ಬರು ರೋಣ ಪೊಲೀಸರ ಮೊರೆ ಹೋಗಿದ್ದಾರೆ.
ರೋಣ ತಾಲ್ಲೂಕಿನ ವ್ಯಕ್ತಿಯೊಬ್ಬರು, ದೆಹಲಿಯಲ್ಲಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಆಗಿ ನಿವೃತ್ತರಾಗಿದ್ದು, ಇಲ್ಲಿ ನೆಲೆಸಿದ್ದಾರೆ. ಅವರ ಇಬ್ಬರು ಗಂಡು ಮಕ್ಕಳು ದೆಹಲಿಯಲ್ಲೇ ಇದ್ದಾರೆ. ಅವರೊಂದಿಗೆ ಗದಗದ ಸಹೋದರಿಯರನ್ನು ಮದುವೆ ಮಾಡಲಾಗಿದ್ದು, ಮದುವೆಯಾದ 2 ತಿಂಗಳ ಬಳಿಕ ಅಣ್ಣ ವ್ಯವಹಾರದಲ್ಲಿ ನಷ್ಟ ಹೊಂದಿದ್ದು, 20 ಲಕ್ಷ ರೂ.ತರುವಂತೆ ಪತ್ನಿಗೆ ಕಿರುಕುಳ ನೀಡತೊಡಗಿದ್ದಾನೆ. ಮಹಿಳೆ ದೆಹಲಿಯ ಮಂಗಳಪುರಿ ಪೊಲೀಸರಿಗೆ ದೂರು ನೀಡಿದ್ದರಾದರೂ, ನಿವೃತ್ತ ಸಬ್ ಇನ್ಸ್ ಪೆಕ್ಟರ್ ತಮ್ಮ ಪ್ರಭಾವ ಬಳಸಿ ದೂರು ದಾಖಲಾಗದಂತೆ ನೋಡಿಕೊಂಡಿದ್ದಾರೆ.
ಗಂಡನ ಕಿರುಕುಳದಿಂದ ಬೇಸತ್ತ ಮಹಿಳೆ ಈಗ ರೋಣ ಪೊಲೀಸರ ಮೊರೆ ಹೋಗಿದ್ದು, ಪತಿ ಹಣಕ್ಕಾಗಿ ದಂಧೆ ನಡೆಸುವಂತೆ ಕಿರುಕುಳ ನೀಡಿದ್ದಾನೆ. 2 ಸಲ ಬಲವಂತವಾಗಿ ಗರ್ಭಪಾತ ಮಾಡಿಸಿದ್ದಾನೆ ಎಂದು ದೂರಿದ್ದಾರೆ. ತಮ್ಮನೂ ಕೂಡ, ಪತ್ನಿಗೆ ನೀನು ಓದಿಲ್ಲ, ವರದಕ್ಷಿಣೆ ತಂದಿಲ್ಲ ಎಂದು ಕಿರುಕುಳ ನೀಡಿದ್ದು, ಈ ಸಹೋದರಿಯರು ಪೊಲೀಸ್ ಹಾಗೂ ಮಹಿಳಾ ಸಹಾಯವಾಣಿಯ ಮೊರೆ ಹೋಗಿದ್ದಾರೆ ಎನ್ನಲಾಗಿದೆ.