ಥಾಣೆ: ಅಪ್ಪನೇ ಮಗಳನ್ನು ನದಿಗೆ ಎಸೆದ ಘಟನೆ ಥಾಣೆಯಲ್ಲಿ ನಡೆದಿದೆ. ಅದೃಷ್ಟವಶಾತ್ ಬಾಲಕಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಥಾಣೆಯ ವರ್ತಕ ನಗರದ ಎಕ್ತಾ ತುಳಸೀರಾಮ್ ಸಿಯಾನಿ ಎಂಬ 6 ವರ್ಷದ ಬಾಲಕಿಯನ್ನು ತಂದೆ ನದಿಗೆ ಎಸೆದಿದ್ದ.
ಹೊಸ ಶೂ ಕೊಡಿಸುವುದಾಗಿ ಮನೆಯಿಂದ ಬಾಲಕಿಯನ್ನು ಕರೆದೊಯ್ದ ತಂದೆ, ಸ್ನೇಹಿತನೊಂದಿಗೆ ಸೇರಿ ಥಾಣೆಯ ಉಲ್ಲಾಸ್ ನದಿಗೆ ಎಸೆದಿದ್ದಾನೆ. ಆದರೆ ಬಾಲಕಿ ನೀರಿಗೆ ಬೀಳದೇ ನದಿಯಲ್ಲಿದ್ದ ಗಿಡಗಳ ಮೇಲೆ ಬಿದ್ದಿದ್ದು, ಸುಮಾರು 11 ಗಂಡೆಗಳ ಕಾಲ ಅಲ್ಲೇ ಸಾವಿನೊಡನೆ ಹೋರಾಟ ನಡೆಸಿದ್ದಾಳೆ. ಬದ್ಲಾಪುರದ ವಾಲಿವ್ಲಿ ಸೇತುವೆ ಸಮೀಪದಲ್ಲಿ ಬಾಲಕಿಯೊಬ್ಬಳು ಅಳುತ್ತಿರುವ ಶಬ್ಧ ಕಂಪನಿಯೊಂದರ ಕಾವಲುಗಾರನಿಗೆ ಕೇಳಿಸಿದೆ. ಆತ ಸೇತುವೆ ಸಮೀಪಕ್ಕೆ ಬಂದು ನೋಡಿದಾಗ, ಬಾಲಕಿ ಕಂಡಿದ್ದಾಳೆ.
ಕಾವಲುಗಾರ ಕೂಡಲೇ ಪೊಲೀಸರಿಗೆ ಫೋನ್ ಮಾಡಿದ್ದು, ತಕ್ಷಣ ಸ್ಥಳಕ್ಕೆ ಬಂದ ಪೊಲೀಸ್ ಹಾಗೂ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಸುಮಾರು 40 ಅಡಿ ಆಳದಲ್ಲಿದ್ದ ಬಾಲಕಿಯನ್ನು ರಕ್ಷಿಸಿದ್ದಾರೆ. ಬಾಲಕಿಯ ತಾಯಿ ನಾಪತ್ತೆ ದೂರು ದಾಖಲಿಸಿದ್ದಳು. ಇದಾದ ನಂತರ ಆರೋಪಿ ತಂದೆ ಪರಾರಿಯಾಗಿದ್ದಾನೆ. ತನ್ನ ತಂದೆಯೇ ನದಿಗೆ ಎಸೆದಿರುವುದಾಗಿ ಬಾಲಕಿ ತಿಳಿಸಿದ್ದಾಳೆ.