ಬೆಂಗಳೂರು: ಭಾರತ ಕ್ರಿಕೆಟ್ ತಂಡ ಬೆಂಗಳೂರಿನ ಎನ್.ಸಿ.ಎ. ಮೈದಾನದಲ್ಲಿ ಕಠಿಣ ತಾಲೀಮು ನಡೆಸುತ್ತಿದ್ದು, ಟೀಂ ಇಂಡಿಯಾ ಪ್ರಧಾನ ಕೋಚ್ ಅನಿಲ್ ಕುಂಬ್ಳೆ ಆಟಗಾರರಿಗೆ ತರಬೇತಿ ನೀಡಿದ್ದಾರೆ. ನೆಟ್ ನಲ್ಲಿ ತಂಡದ ಬ್ಯಾಟ್ಸ್ ಮನ್ ಗಳಿಗೆ ಕುಂಬ್ಳೆ ಬೌಲಿಂಗ್ ಮಾಡಿದ್ದಾರೆ.
ಟೀಂ ಇಂಡಿಯಾ ಯಶಸ್ಸಿಗೆ ನೂತನ ಕೋಚ್ ಅನಿಲ್ ಕುಂಬ್ಳೆ ಹಲವು ಯೋಜನೆ ರೂಪಿಸಿದ್ದಾರೆ. ತಂಡದ ಬ್ಯಾಟ್ಸ್ ಮನ್ ಗಳಿಗೆ ಸ್ವತಃ ಅವರೇ ಬೌಲಿಂಗ್ ಮಾಡಿ ಗಮನ ಸೆಳೆದಿದ್ದಾರೆ. ಇದುವರೆಗೂ ಟೀಂ ಇಂಡಿಯಾ ಕೋಚ್ ಗಳಾದವರು ನೆಟ್ ನಲ್ಲಿ ಬೌಲಿಂಗ್ ಮಾಡಿದ ಉದಾಹರಣೆ ಇಲ್ಲ ಎನ್ನಲಾಗಿದೆ. ಕುಂಬ್ಳೆ ಅವರ ತರಬೇತಿಯಿಂದ ಉತ್ಸುಕರಾದ ಆಟಗಾರರು, ನೆಟ್ ನಲ್ಲಿ ಕಠಿಣ ತಾಲೀಮು ನಡೆಸಿದ್ದಾರೆ. ಅಲ್ಲದೇ, ಶಿಬಿರದಲ್ಲಿ ರಾಜ್ಯ ರಣಜಿ ತಂಡದ ಆಟಗಾರರೂ ಪಾಲ್ಗೊಂಡಿದ್ದಾರೆ.
ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದಿರುವ ರಾಜ್ಯದ ಆಟಗಾರರಾದ ಶ್ರೇಯಸ್ ಗೋಪಾಲ್, ಆರ್.ವಿನಯ್ ಕುಮಾರ್, ಶರತ್ ಮೊದಲಾದವರು ಬೌಲಿಂಗ್ ಮಾಡಿದರು. ಶಿಬಿರದ 2ನೇ ದಿನದಲ್ಲಿ ಕೋಚ್ ಅನಿಲ್ ಕುಂಬ್ಳೆ ಬೌಲಿಂಗ್ ಅಭ್ಯಾಸಕ್ಕೆ ಆದ್ಯತೆ ನೀಡಿದ್ದರೆನ್ನಲಾಗಿದೆ.