ಆಶ್ಚರ್ಯ ಆದ್ರೂ ನಿಜ. ದೇಶದ ಬಹುತೇಕ ಶಾಲೆಗಳು ಶಿಕ್ಷಕರ ಕೊರತೆಯನ್ನು ಎದುರಿಸುತ್ತಿದ್ದರೆ ಈ ಶಾಲೆಯಲ್ಲಿ ಶಿಕ್ಷಕರುಗಳಿದ್ದರೂ ಶಾಲೆ ನಡೆಯುವುದು ಮಾತ್ರ ವಿದ್ಯಾರ್ಥಿಗಳ ಮರ್ಜಿ ಮೇಲೆ. ವಿದ್ಯಾರ್ಥಿಗಳು ತಮಗಿಷ್ಟ ಬಂದರೆ ಮಾತ್ರ ಶಾಲೆಗೆ ಬರುತ್ತಾರೆ. ಹಾಗೆ ಬಂದವರಿಗೆ ಶಿಕ್ಷಕರು ಪಾಠ ಮಾಡುತ್ತಾರೆ. ಬಹಳಷ್ಟು ಬಾರಿ ಶಿಕ್ಷಕರುಗಳೇ ವಿದ್ಯಾರ್ಥಿಗಳ ಮನೆಗೆ ಹೋಗಿ ಅವರುಗಳನ್ನು ಕರೆದುಕೊಂಡು ಬಂದು ಪಾಠ ಮಾಡುತ್ತಾರೆ. ಇಂತದೊಂದು ಚಿತ್ರಣ ಕಂಡು ಬರುವುದು ಒಡಿಶಾದಲ್ಲಿ.
ಅಲ್ಲಿನ ಬಲಸೋರ್ ಪಟ್ಟಣದಲ್ಲಿರುವ ಈ ಶಾಲೆ, ಆರಂಭವಾಗಿರುವುದು 1912 ರಲ್ಲಿ. ಇಷ್ಟು ಸುದೀರ್ಘ ಇತಿಹಾಸವಿರುವ ಈ ಶಾಲೆಯಲ್ಲಿ ಹಾಲಿ 35 ಮಂದಿ ವಿದ್ಯಾರ್ಥಿಗಳಿದ್ದಾರೆ. 1 ರಿಂದ 5 ನೇ ತರಗತಿವರೆಗೆ ಇಲ್ಲಿ ಶಿಕ್ಷಣ ನೀಡಲಾಗುತ್ತಿದ್ದು, ಮುಖ್ಯ ಶಿಕ್ಷಕಿ ಸೇರಿದಂತೆ ಮೂವರು ಶಿಕ್ಷಕರಿದ್ದಾರೆ. 1 ನೇ ತರಗತಿಯಲ್ಲಿ ಒಬ್ಬ, 2 ನೇ ತರಗತಿಯಲ್ಲಿ ಮೂವರು, 3 ನೇ ತರಗತಿಯಲ್ಲಿ ಆರು ಹಾಗೂ ನಾಲ್ಕನೇ ತರಗತಿಯಲ್ಲಿ ಹದಿನೇಳು ಹಾಗೂ 5 ನೇ ತರಗತಿಯಲ್ಲಿ ಎಂಟು ಮಂದಿ ವಿದ್ಯಾರ್ಥಿಗಳಿದ್ದಾರೆ.
ಇಲ್ಲಿನ ಬಹುಪಾಲು ವಿದ್ಯಾರ್ಥಿಗಳು ತೀರಾ ಬಡ ಕುಟುಂಬದ ಹಿನ್ನಲೆಯನ್ನು ಹೊಂದಿರುವವರು. ಮಕ್ಕಳೂ ಕೂಡಾ ಚಿಂದಿ ಆರಿಸಲು ಹೋಗುತ್ತಾರೆ. ಇವರುಗಳು ಮನಸ್ಸು ಬಂದರೆ ಮಾತ್ರ ಶಾಲೆಗೆ ಹೋಗುತ್ತಾರೆ. ಇವರುಗಳು ಹೋದರಷ್ಟೇ ಶಾಲೆ ನಡೆಯುತ್ತದೆ. ಇತ್ತೀಚೆಗೆ ಶಾಲೆ ಆರಂಭಗೊಂಡ ದಿನ ಒಬ್ಬೇ ಒಬ್ಬ ವಿದ್ಯಾರ್ಥಿಯೂ ಹಾಜರಾಗಿರಲಿಲ್ಲ. ಈಗ ಈ ಶಾಲೆಯನ್ನು ಬೇರೆ ಶಾಲೆ ಜೊತೆ ವಿಲೀನಗೊಳಿಸಲು ಶಿಕ್ಷಣ ಇಲಾಖೆ ಮುಂದಾಗಿದೆಯಲ್ಲದೇ ಅಲ್ಲಿನ ಶಿಕ್ಷಕರುಗಳನ್ನು ಬೇರೆಡೆ ನಿಯೋಜಿಸಲು ನಿರ್ಧರಿಸಿದೆ. ಜೊತೆಗೆ ಮಕ್ಕಳನ್ನು ಪ್ರತಿ ನಿತ್ಯ ಶಾಲೆಗೆ ಕಳುಹಿಸುವಂತೆ ಪೋಷಕರ ಮನವೊಲಿಸಲು ಸಜ್ಜಾಗಿದೆ.