ಕಲಬುರಗಿ: ಮುಖ್ಯಮಂತ್ರಿ ಸಿದ್ಧರಾಮಯ್ಯ ರಾಜ್ಯ ಸಚಿವ ಸಂಪುಟ ಪುನಾರಚನೆ ಮಾಡಿದ ನಂತರ, ಸಚಿವ ಸ್ಥಾನ ಕಳೆದುಕೊಂಡವರು, ಅವಕಾಶ ವಂಚಿತರ ಆಕ್ರೋಶ ಹೆಚ್ಚಾಗತೊಡಗಿದ್ದು, ಈಗಾಗಲೇ ಸಚಿವ ಸ್ಥಾನ ಕಳೆದುಕೊಂಡಿರುವ ಅಂಬರೀಶ್ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಿದ್ದಾರೆ.
ಯಾವುದೇ ಕಾರಣಕ್ಕೂ ರಾಜೀನಾಮೆ ವಾಪಸ್ ಪಡೆಯುವುದಿಲ್ಲ ಎಂದು ಅಂಬರೀಶ್ ಈಗಾಗಲೇ ಹೇಳಿದ್ದು, ಇದೀಗ ಅಫಜಲ್ ಪುರ ಶಾಸಕ ಮಾಲೀಕಯ್ಯ ಗುತ್ತೆದಾರ್ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಈ ಬಾರಿ ಸಚಿವ ಸಂಪುಟ ಪುನಾರಚನೆ ಸಂದರ್ಭದಲ್ಲಿ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಮಾಲೀಕಯ್ಯ ಗುತ್ತೆದಾರ್ ಅವರಿಗೆ ನಿರಾಸೆಯಾಗಿದೆ. ಸೀನಿಯರ್ ಶಾಸಕರಾಗಿರುವ ಅವರು ಸಹಜವಾಗಿಯೇ ಆಕ್ರೋಶಗೊಂಡಿದ್ದು, ಸ್ಟೇಷನ್ ಗಾಣಗಾಪುರದಲ್ಲಿ ಬೆಂಬಲಿಗರ ಸಭೆ ನಡೆಸಿದ್ದಾರೆ.
ಸಭೆಯಲ್ಲಿ ಮಾತನಾಡಿದ ಅವರು, ಸಚಿವ ಸ್ಥಾನ ಸಿಗದಿರುವುದಕ್ಕೆ ಬೇಸರವಾಗಬೇಡಿ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಕರೆ ಮಾಡಿದ್ದು, ನಿಗಮ ಮಂಡಳಿಗೆ ನೇಮಕ ಮಾಡುವುದಾಗಿ ಹೇಳಿದ್ದಾರೆ. ಆದರೆ, ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಅವರಿಗೆ ತಿಳಿಸಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.