ಮೆಲ್ಬರ್ನ್: ಧೂಮಪಾನ ಮಾಡುವುದು ಇತ್ತೀಚೆಗೆ ಫ್ಯಾಷನ್ ಆಗಿಬಿಟ್ಟಿದೆ. ಚಟಕ್ಕೆ, ಶೋಕಿಗೆ ಧೂಮಪಾನ ಮಾಡುವುದು ಹೆಚ್ಚಾಗಿದ್ದು, ಹೆಣ್ಣುಮಕ್ಕಳು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಧೂಮಪಾನ ಮಾಡುತ್ತಾರೆ. ಎಚ್ಚರಿಕೆಯ ಸಂದೇಶವನ್ನು ಕಡೆಗಣಿಸಿ ಧೂಮಪಾನ ಮಾಡುವುದು ಆತಂಕಕಾರಿ ಬೆಳವಣಿಗೆಯಾಗಿದೆ.
ಆಸ್ಟ್ರೇಲಿಯಾದಲ್ಲಿ ಹೊಟ್ಟೆಯಲ್ಲಿರುವ ಮಗುವಿನ ತೂಕ ಕಡಿಮೆಯಾಗಿ ಹೆರಿಗೆ ನೋವು ಕಡಿಮೆಯಾಗುತ್ತದೆ ಎಂಬ ಕಾರಣದಿಂದ ಗರ್ಭಿಣಿಯರು ಹೆಚ್ಚಾಗಿ ಧೂಮಪಾನ ಮಾಡುತ್ತಿರುವ ಸಂಗತಿ ಬೆಳಕಿಗೆ ಬಂದಿದೆ. ಧೂಮಪಾನದಿಂದ ನಿಮ್ಮ ಆರೋಗ್ಯಕ್ಕೆ ಹಾನಿಯಾಗುತ್ತದೆ. ಧೂಮಪಾನ ಮಾಡುವುದರಿಂದ ನಿಮ್ಮ ಹೊಟ್ಟೆಯಲ್ಲಿರುವ ಮಗುವಿನ ತೂಕ ಕಡಿಮೆಯಾಗಬಹುದೆಂದು ಸಿಗರೇಟ್ ಪ್ಯಾಕ್ ಗಳ ಮೇಲೆ ಎಚ್ಚರಿಕೆಯ ಸಂದೇಶ ಮುದ್ರಿಸಲಾಗಿರುತ್ತದೆ. ಇದನ್ನೇ ತಪ್ಪಾಗಿ ಅರ್ಥೈಸಿಕೊಂಡು ಸಿಗರೇಟ್ ಸೇದುವ ಗರ್ಭಿಣಿಯರ ಸಂಖ್ಯೆ ಹೆಚ್ಚಾಗಿದೆ ಎನ್ನಲಾಗಿದೆ.
ಮಗುವಿನ ತೂಕ ಕಡಿಮೆಯಾಗುವುದರಿಂದ ಹೆರಿಗೆ ನೋವು ಕಡಿಮೆಯಾಗುತ್ತದೆ ಎಂಬ ಭ್ರಮೆ ಹೆಚ್ಚಾಗಿದ್ದು, ಇಂತಹ ತಪ್ಪು ಕಲ್ಪನೆಯಿಂದ ಗರ್ಭಿಣಿಯರು ಹೆಚ್ಚಾಗಿ ಸ್ಮೋಕಿಂಗ್ ಮಾಡುವುದನ್ನು ರೂಢಿಸಿಕೊಂಡಿದ್ದಾರೆ. ಇದು ಕಳವಳಕಾರಿ ಸಂಗತಿಯಾಗಿದ್ದು, ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದು ಹೇಳಲಾಗಿದೆ.