ಬಹು ರಾಷ್ಟ್ರೀಯ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಟೆಕ್ಕಿಯೊಬ್ಬ ಆತ್ಮಹತ್ಯೆಗೆ ಮುಂದಾಗಿದ್ದು, ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ವಿಚಾರವನ್ನು ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಹಾಕಿದ ವೇಳೆ ಸಕಾಲಕ್ಕೆ ಅದನ್ನು ಗಮನಿಸಿದ ಸ್ನೇಹಿತರು ಕೂಡಲೇ ಸಮೀಪದಲ್ಲಿದ್ದವರಿಗೆ ಸುದ್ದಿ ಮುಟ್ಟಿಸಿ ಆತನ ಪ್ರಾಣ ಉಳಿಸಿರುವ ಘಟನೆ ಗುರಂಗಾವ್ ನಲ್ಲಿ ನಡೆದಿದೆ.
32 ವರ್ಷದ ಸಾಫ್ಟ್ ವೇರ್ ಇಂಜಿನಿಯರ್ ವರುಣ್ ಮಲ್ಲಿಕ್ ಎಂಬಾತ ತಾನು ಜೀವನದಲ್ಲಿ ಜಿಗುಪ್ಸೆ ಹೊಂದಿದ್ದು, ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದ. ಅಲ್ಲದೇ ತನ್ನ ಸಾವಿಗೆ ಯಾರನ್ನೂ ಹೊಣೆಗಾರರನ್ನಾಗಿ ಮಾಡುವುದು ಬೇಡ. ಇದು ನನ್ನ ಸ್ವಂತ ನಿರ್ಧಾರ ಎಂದು ಹೇಳಿಕೊಂಡಿದ್ದ. ಜೊತೆಗೆ ತಾನು ಕೈ ಕೊಯ್ದುಕೊಂಡಿರುವ ಫೋಟೋವನ್ನೂ ಹಾಕಿದ್ದ.
ಇದನ್ನು ಗಮನಿಸಿದ ಸ್ನೇಹಿತರು, ವರುಣ್ ಮಲ್ಲಿಕ್ ಫ್ಲಾಟ್ ಸಮೀಪದಲ್ಲಿದ್ದವರಿಗೆ ಕೂಡಲೇ ಧಾವಿಸುವಂತೆ ಮನವಿ ಮಾಡಿದ್ದಲ್ಲದೇ ಪೊಲೀಸರಿಗೂ ವಿಷಯ ಮುಟ್ಟಿಸಿದ್ದರು. ಸ್ನೇಹಿತರಿಂದ ವಿಷಯ ತಿಳಿದ ಆತನ ಸಹೋದರ ಕೂಡಲೇ ಫ್ಲಾಟ್ ಗೆ ಧಾವಿಸಿ ರಕ್ತದ ಮಡುವಿನಲ್ಲಿ ಬಿದ್ದ ವರುಣ್ ಮಲ್ಲಿಕ್ ನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಐಸಿಯು ನಲ್ಲಿರುವ ವರುಣ್ ಮಲ್ಲಿಕ್ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ. ವರುಣ್ ಮಲ್ಲಿಕ್ ನ ಒಂದು ಕಿಡ್ನಿ ವಿಫಲಗೊಂಡಿದ್ದು, ಆ ಸಂದರ್ಭದಲ್ಲಿ ಆತನ ತಾಯಿ ಕಿಡ್ನಿ ದಾನ ಮಾಡಿದ್ದರೆಂದು ಹೇಳಲಾಗಿದೆ. ಅವರು ಒಂದು ವರ್ಷದ ಹಿಂದೆ ತೀರಿಕೊಂಡ ಬಳಿಕ ವರುಣ್ ಮಲ್ಲಿಕ್ ಖಿನ್ನತೆಗೊಳಗಾಗಿದ್ದನೆಂದು ಆತನ ಸ್ನೇಹಿತರು ತಿಳಿಸಿದ್ದಾರೆ.