ತಾನು ಪ್ರೀತಿಸುತ್ತಿದ್ದ ಯುವಕನೊಂದಿಗೆ ಮದುವೆ ಮಾಡಿಕೊಡಲು ತನ್ನ ತಂದೆ ಒಪ್ಪಿಗೆ ನೀಡಲಿಲ್ಲವೆಂಬ ಕಾರಣಕ್ಕೆ 19 ವರ್ಷದ ಯುವತಿಯೊಬ್ಬಳು 1.50 ಲಕ್ಷ ರೂ. ಸುಫಾರಿ ನೀಡಿ ತಂದೆಯನ್ನೇ ಹತ್ಯೆ ಮಾಡಿಸಿರುವ ಆಘಾತಕಾರಿ ಘಟನೆ ಕೊಯಮತ್ತೂರಿನಲ್ಲಿ ನಡೆದಿದೆ.
ಕಂಪ್ಯೂಟರ್ ಸೈನ್ಸ್ ವ್ಯಾಸಂಗ ಮಾಡುತ್ತಿದ್ದ ಮಹಾಲಕ್ಷ್ಮಿ, ಸತೀಶ್ ಎಂಬ ಯುವಕನನ್ನು ಪ್ರೀತಿಸುತ್ತಿದ್ದು, ಇದಕ್ಕೆ ಆಕೆಯ ತಂದೆ ನಾಗರಾಜ್ ವಿರೋಧ ವ್ಯಕ್ತಪಡಿಸಿದ್ದಲ್ಲದೇ ಆತನೊಂದಿಗೆ ವಿವಾಹವಾದರೆ ಆಸ್ತಿಯಲ್ಲಿ ನಯಾಪೈಸೆಯನ್ನೂ ಕೊಡುವುದಿಲ್ಲವೆಂದು ಖಡಾಖಂಡಿತವಾಗಿ ಹೇಳಿದ್ದರೆನ್ನಲಾಗಿದೆ.
ತಂದೆಯ ಆಸ್ತಿ ಪಡೆಯಲು ಹಾಗೂ ತಾನು ಪ್ರೀತಿಸುತ್ತಿದ್ದ ಯುವಕನನ್ನು ಮದುವೆಯಾಗಲು ನಿರ್ಧರಿಸಿದ ಮಹಾಲಕ್ಷ್ಮಿ, ತನ್ನ ಒಡವೆಯನ್ನು ಮಾರಿ ಅದರಿಂದ ಬಂದ 1.50 ಲಕ್ಷ ರೂ.ಗಳನ್ನು ಪ್ರಿಯಕರನಿಗೆ ನೀಡಿದ್ದಲ್ಲದೇ ತನ್ನ ತಂದೆಯನ್ನು ಹತ್ಯೆ ಮಾಡಲು ಸೂಚಿಸಿದ್ದಾಳೆ. ಅದರಂತೆ ಮೇ 23 ರಂದು ತನ್ನ ಫಾರ್ಮ್ ಹೌಸ್ ಗೆ ತೆರಳಿದ್ದ ನಾಗರಾಜ್ ಅವರನ್ನು ಸತೀಶ್ ಮತ್ತವನ ಗೆಳೆಯರು ಹತ್ಯೆ ಮಾಡಿದ್ದರು.
ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರಿಗೆ ನಾಗರಾಜನ ಮಗಳು ಮಹಾಲಕ್ಷ್ಮಿ ಮೇಲೆ ಅನುಮಾನ ಬಂದಿತ್ತಾದರೂ ಆಕೆ ತನಿಖೆಯ ದಿಕ್ಕು ತಪ್ಪಿಸಲು ಯತ್ನಿಸಿದ್ದಳು. ಇದೀಗ ಸೂಕ್ತ ಸಾಕ್ಷ್ಯಾಧಾರಗಳನ್ನು ಕಲೆ ಹಾಕಿದ ಪೊಲೀಸರು, ಮಹಾಲಕ್ಷ್ಮಿ, ಸತೀಶ್ ಮತ್ತವನ ನಾಲ್ಕು ಮಂದಿ ಗೆಳೆಯರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.