ಸಿಡ್ನಿ: ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್, ವೃತ್ತಿ ಜೀವನದ 7ನೇ ಸೂಪರ್ ಸೀರೀಸ್ ಪ್ರಶಸ್ತಿ ಗೆದ್ದಿದ್ದಾರೆ. ಆಸ್ಟ್ರೇಲಿಯನ್ ಓಪನ್ ಸೂಪರ್ ಸೀರೀಸ್ ಬ್ಯಾಡ್ಮಿಂಟನ್ ಫೈನಲ್ ನಲ್ಲಿ ಅವರು ವಿಜೇತರಾಗಿದ್ದಾರೆ.
ಸೈನಾ ನೆಹ್ವಾಲ್ ಫೈನಲ್ ಪಂದ್ಯದಲ್ಲಿ ಚೀನಾದ ಸುನ್ ಯು ವಿರುದ್ಧ 11-21, 21-14, 21-19 ಗೇಮ್ ಗಳಿಂದ ಜಯಗಳಿಸಿದ್ದಾರೆ. ಸಿಡ್ನಿಯ ಒಲಿಂಪಿಕ್ ಪಾರ್ಕ್ ನಲ್ಲಿ ನಡೆದ ಜಿದ್ದಾಜಿದ್ದಿನ ಪಂದ್ಯದಲ್ಲಿ ಸೈನಾ ಗೆಲುವು ಸಾಧಿಸುವುದರೊಂದಿಗೆ 37 ಲಕ್ಷ ರೂ ನಗದು ಹಾಗೂ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಫೈನಲ್ ಪಂದ್ಯದ ಮೊದಲ ಗೇಮ್ ನಲ್ಲಿ ಸೈನಾ ಅವರನ್ನು 21-11 ಅಂತರದಿಂದ ಸುನ್ ಯು ಸೋಲಿಸಿದ್ದರಾದರೂ, ನಂತರ ಸೈನಾ ಮುನ್ನಡೆ ಸಾಧಿಸಿದರು.
2014ರಲ್ಲಿ ಸ್ಪೇನ್ ಆಟಗಾರ್ತಿ ಕ್ಯಾರೊಲಿನಾ ಮರಿನ್ ಅವರನ್ನು ಸೋಲಿಸಿ ಮೊದಲ ಬಾರಿಗೆ ಆಸ್ಟ್ರೇಲಿಯನ್ ಓಪನ್ ಸೂಪರ್ ಸೀರೀಸ್ ಗೆದ್ದಿದ್ದರು. ಈಗ 2ನೇ ಬಾರಿಗೆ ಸೈನಾ ಈ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದು, ಈ ಮೂಲಕ ವೃತ್ತಿ ಜೀವನದಲ್ಲಿ 7ನೇ ಬಾರಿಗೆ ಸೂಪರ್ ಸೀರೀಸ್ ಪ್ರಶಸ್ತಿ ಗೆದ್ದಂತಾಗಿದೆ.