ಮುಂಬೈ: ವಿಚಾರವಾದಿ ನರೇಂದ್ರ ದಾಬೋಲ್ಕರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿ.ಬಿ.ಐ. ಅಧಿಕಾರಿಗಳು ಮುಂಬೈನಲ್ಲಿ ವೈದ್ಯರೊಬ್ಬರನ್ನು ಬಂಧಿಸಿದ್ದಾರೆ. ಸನಾತನ ಸಂಸ್ಥೆಯ ಸದಸ್ಯ ಡಾ. ವೀರೇಂದ್ರ ತಾವಡೆ ಬಂಧಿತ ಆರೋಪಿ.
2013ರಲ್ಲಿ ಪುಣೆಯಲ್ಲಿ ನಡೆದ ವಿಚಾರವಾದಿ ನರೇಂದ್ರ ದಾಬೋಲ್ಕರ್ ಹತ್ಯೆ ಪ್ರಕರಣದಲ್ಲಿ ಇವರ ಪಾತ್ರವಿದೆ ಎನ್ನಲಾಗಿದೆ. ವೀರೇಂದ್ರ ತಾವಡೆ ಮುಂಬೈನಲ್ಲಿ ಇ.ಎನ್.ಟಿ. ತಜ್ಞರಾಗಿದ್ದು, ಸನಾತನ ಸಂಸ್ಥೆಯ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು 2009ರಲ್ಲಿ ಗೋವಾದಲ್ಲಿ ನಡೆದ ಬಾಂಬ್ ಸ್ಪೋಟ ಪ್ರಕರಣದ ಪ್ರಮುಖ ಆರೋಪಿ ಎನ್ನಲಾಗಿರುವ ಸಾರಂಗ್ ಅಕೋಲ್ಕರ್ ಜೊತೆಗೆ ನಿಕಟ ಸಂಪರ್ಕ ಹೊಂದಿದ್ದರೆನ್ನಲಾಗಿದೆ.
ಸಾರಂಗ್ ಜೊತೆಗೆ ಇ ಮೇಲ್ ನಲ್ಲಿ ಇವರು ಸಂಪರ್ಕದಲ್ಲಿದ್ದು, ನರೇಂದ್ರ ದಾಬೋಲ್ಕರ್ ಹತ್ಯೆಯಲ್ಲಿ ಇವರ ಪಾತ್ರವಿರಬಹುದೆಂದು ಹೇಳಲಾಗಿದೆ. 2013ರ ಆಗಸ್ಟ್ ನಲ್ಲಿ ನರೇಂದ್ರ ದಾಬೋಲ್ಕರ್ ಅವರನ್ನು ಗುಂಡಿಟ್ಟು ಹತ್ಯೆ ಮಾಡಲಾಗಿತ್ತು. ಅದಾಗಿ ಇಷ್ಟು ವರ್ಷಗಳ ನಂತರವೂ ಕೊಲೆ ಪ್ರಕರಣ ನಿಗೂಢವಾಗಿತ್ತು. ಇದೀಗ ವೈದ್ಯ ವೀರೇಂದ್ರ ತಾವಡೆ ಅವರನ್ನು ಬಂಧಿಸುವುದರೊಂದಿಗೆ ಪ್ರಕರಣ ಹೊಸ ತಿರುವು ಪಡೆದಿದೆ.