ರಾಜ್ಯದ ಪ್ರಸಿದ್ದ ತೀರ್ಥ ಕ್ಷೇತ್ರಗಳಲ್ಲಿ ಒಂದಾದ ಕುಕ್ಕೆ ಸುಬ್ರಮಣ್ಯ ದೇವಸ್ಥಾನದ ತೀರ್ಥ ಬಾವಿಯಲ್ಲಿ ದಿನೇ ದಿನೇ ನೀರು ಬರಿದಾಗುತ್ತಿರುವ ಕಾರಣ ದೇವಸ್ಥಾನದಿಂದ 2 ಕಿ.ಮೀ. ದೂರದಲ್ಲಿರುವ ದರ್ಪಣ ತೀರ್ಥ ಹೊಳೆಯಿಂದ ಪೈಪ್ ಮೂಲಕ ನೀರು ತರುವ ಪ್ರಯತ್ನ ನಡೆದಿದೆ.
ಕುಕ್ಕೆ ಸುಬ್ರಮಣ್ಯಕ್ಕೆ ದಿನನಿತ್ಯ ಸಾವಿರಾರು ಭಕ್ತರು ಆಗಮಿಸುತ್ತಿದ್ದು, ಸದ್ಯ ಬಾವಿಯಲ್ಲಿ ದೇವರ ಅಭಿಷೇಕಕ್ಕೆ ಸಾಕಾಗುವಷ್ಟು ಮಾತ್ರ ನೀರಿದೆ ಎನ್ನಲಾಗಿದೆ. ಹೀಗಾಗಿ ಭಕ್ತರಿಗೆ ತೀರ್ಥ ಕೊಡಲೂ ನೀರು ಸಾಕಾಗುತ್ತಿಲ್ಲ. ದಿನನಿತ್ಯ 2 ಸಾವಿರ ತೀರ್ಥದ ಬಾಟಲುಗಳ ಅಗತ್ಯವಿದ್ದು, ನೀರಿನ ಕೊರತೆಯಿರುವ ಕಾರಣ ಸದ್ಯ ತೀರ್ಥ ಬಾಟಲಿಗಳನ್ನು ತಡೆ ಹಿಡಿಯಲಾಗಿದೆ.
ಅಂತರ್ಜಲ ಕುಸಿದಿರುವುದೇ ದೇವಸ್ಥಾನದ ತೀರ್ಥ ಬಾವಿಯಲ್ಲಿ ನೀರು ಕಡಿಮೆಯಾಗಲು ಕಾರಣವೆನ್ನಲಾಗಿದ್ದು, ಇದೀಗ ದರ್ಪಣ ತೀರ್ಥದಿಂದ ನೀರು ತಂದು ಅದನ್ನು ಅಭಿಷೇಕಕ್ಕೆ ಬಳಸುವ ಹಾಗೂ ಭಕ್ತರಿಗೆ ತೀರ್ಥ ಕೊಡುವ ಕುರಿತು ಜ್ಯೋತಿಷ್ಯ ಶಾಸ್ತ್ರದ ಮೂಲಕ ಪರಿಹಾರ ಕೇಳಲಾಗಿದೆ ಎನ್ನಲಾಗಿದೆ. ಶೀಘ್ರದಲ್ಲೇ ಮಳೆಯಾದರೇ ಈ ಸಮಸ್ಯೆ ಬಗೆಹರಿಯಬಹುದೆಂಬ ವಿಶ್ವಾಸ ದೇವಸ್ಥಾನ ಮಂಡಳಿಯದ್ದು.