ಅನಾರೋಗ್ಯದಿಂದ ಬಳಲುತ್ತಿದ್ದ ಖ್ಯಾತ ಬಾಕ್ಸಿಂಗ್ ಪಟು ಮಹಮ್ಮದ್ ಆಲಿ, ಶನಿವಾರದಂದು ಅಮೆರಿಕಾದ ಆರಿಜೋನಾ ಆಸ್ಪತ್ರೆಯಲ್ಲಿ ನಿಧನರಾಗಿದ್ದು, ಇಡೀ ವಿಶ್ವವೇ, ಬಾಕ್ಸಿಂಗ್ ಲೋಕದ ದಂತಕತೆ ಮಹಮ್ಮದ್ ಅಲಿ ಅವರ ಅಗಲುವಿಕೆಗೆ ಕಂಬನಿ ಮಿಡಿದಿದೆ.
ಆದರೆ ಮಹಮ್ಮದ್ ಆಲಿ ನಿಧನದ ಸಂದರ್ಭದಲ್ಲಿ ಕೆಲವರು ಮಾಡಿದ ಯಡವಟ್ಟುಗಳ ಕಾರಣಕ್ಕಾಗಿ ಸಾಮಾಜಿಕ ಜಾಲತಾಣದಲ್ಲಿ ಗೇಲಿಗೆ ಗುರಿಯಾಗುತ್ತಿದ್ದಾರೆ. ಕೇರಳದ ಕ್ರೀಡಾ ಸಚಿವರು, ಮಹಮ್ಮದ್ ಆಲಿ ಕೇರಳದ ಹೆಮ್ಮೆಯ ಕ್ರೀಡಾಪಟು ಎಂದು ಹೇಳುವ ಮೂಲಕ ನಗೆಪಾಟಲಿಗೀಡಾಗಿದ್ದರೆ, ಇದೇ ರೀತಿ ಮತ್ತೊಂದು ಯಡವಟ್ಟು ಮಾಡಿರುವ ಯುವತಿಯೊಬ್ಬಳು ತಾನು ಮಾಡಿದ ಟ್ವೀಟ್ ನಿಂದಾಗಿ ಕೆಲ ಗಂಟೆಗಳಲ್ಲೇ ಟ್ರೆಂಡಿಂಗ್ ಟಾಪಿಕ್ ಆಗಿದ್ದಾಳೆ.
ಆನಾದಿತಾ ಪಟೇಲ್ ಎಂಬ ಈ ಯುವತಿ, ಮಹಮ್ಮದ್ ಆಲಿಯವರಿಗೆ ಸಂತಾಪ ಸೂಚಿಸುವ ಭರದಲ್ಲಿ ಅವರನ್ನು ಫುಟ್ಬಾಲ್ ಆಟಗಾರರನ್ನಾಗಿ ಮಾಡಿದ್ದಾಳೆ. ಅಷ್ಟೇ ಅಲ್ಲ, ಮರಡೋನಾ, ಮೆಸ್ಸಿ ಹಾಗೂ ರೋನಾಲ್ಡೊ ಅವರ ಜೊತೆ ಹೋಲಿಕೆ ಮಾಡಿ ಟ್ವೀಟ್ ಮಾಡಿದ್ದು, ಕೆಲವೇ ಗಂಟೆಗಳಲ್ಲಿ ಆಕೆಯನ್ನು ಫೇಮಸ್ (?) ಮಾಡಿಬಿಟ್ಟಿದೆ. ತನ್ನ ಟ್ವೀಟ್ ಟ್ರೆಂಡಿಂಗ್ ಆಗುತ್ತಿದ್ದಂತೆಯೇ ಮಾಡಿದ ಪ್ರಮಾದ ಅರಿತ ಯುವತಿ, ಅದನ್ನು ಸರಿಪಡಿಸಿ ಸ್ಪಷ್ಟೀಕರಣ ನೀಡಿದರೂ ಗೇಲಿ ಮಾಡುವುದು ನಿಂತಿಲ್ಲ. ಕೊನೆಗೆ ಬೇಸತ್ತ ಆಕೆ, ತನ್ನ ಟ್ವಿಟ್ಟರ್ ಖಾತೆಯನ್ನೇ ಸ್ಥಗಿತಗೊಳಿಸಿದ್ದಾಳೆ.