ಕುಖ್ಯಾತ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಜೊತೆ ದೂರವಾಣಿಯಲ್ಲಿ ಮಾತನಾಡಿದ್ದಾರೆಂಬ ಆರೋಪಕ್ಕೆ ಗುರಿಯಾಗಿದ್ದ ಮಹಾರಾಷ್ಟ್ರದ ಕಂದಾಯ ಸಚಿವ ಏಕನಾಥ್ ಖಾಡ್ಸೆ ಕೊನೆಗೂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಪ್ರಭಾವಿ ಸಚಿವರಾಗಿದ್ದ ಏಕನಾಥ್ ಖಾಡ್ಸೆಯವರನ್ನು ಸಂಪುಟದಿಂದ ಕೈ ಬಿಟ್ಟರೆ ಮಹಾರಾಷ್ಟ್ರ ಬಿಜೆಪಿಯಲ್ಲಿ ಎಲ್ಲಿ ಭಿನ್ನಮತ ಭುಗಿಲೇಳುತ್ತದೋ ಎಂಬ ಆತಂಕ ಹೊಂದಿದ್ದ ಬಿಜೆಪಿ ರಾಷ್ಟ್ರೀಯ ವರಿಷ್ಟರು, ಏಕನಾಥ್ ಖಾಡ್ಸೆಯವರ ಮನವೊಲಿಸಿ ರಾಜೀನಾಮೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಭೂವಿವಾದವೊಂದಕ್ಕೆ ಸಂಬಂಧಿಸಿದಂತೆ ಏಕನಾಥ್ ಖಾಡ್ಸೆ, ದಾವೂದ್ ಇಬ್ರಾಹಿಂ ಜೊತೆ ದೂರವಾಣಿಯಲ್ಲಿ ಮಾತನಾಡಿದ್ದರೆಂದು ಆರೋಪಿಸಲಾಗಿದ್ದು, ಕಾಂಗ್ರೆಸ್, ಖಾಡ್ಸೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿತ್ತು. ಬಿಜೆಪಿ ಮಿತ್ರ ಪಕ್ಷ ಶಿವಸೇನೆ ಸಹ, ಆರೋಪಮುಕ್ತರಾಗುವವರೆಗೂ ಏಕನಾಥ್ ಖಾಡ್ಸೆ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಒತ್ತಾಯಿಸಿತ್ತು. ಈ ಹಿನ್ನಲೆಯಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ರನ್ನು ದೆಹಲಿಗೆ ಕರೆಸಿಕೊಂಡಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ಏಕನಾಥ್ ಖಾಡ್ಸೆಯವರ ಮನವೊಲಿಸಿ ರಾಜೀನಾಮೆ ಪಡೆಯುವಂತೆ ಸೂಚಿಸಿದ್ದರು.