ಮಹಿಳೆ ಇಂದು ಎಲ್ಲ ಕ್ಷೇತ್ರಗಳಲ್ಲೂ ಪುರುಷನಿಗೆ ಸರಿಸಮಾನವಾಗಿದ್ದಾಳೆ. ಆದರೂ ಕೆಲವರಿಗೆ ಗಂಡು ಮಕ್ಕಳ ಮೇಲಿನ ವ್ಯಾಮೋಹ ಮಾತ್ರ ಕಡಿಮೆಯಾಗಿಲ್ಲ. ತನ್ನ ಪತ್ನಿ ಸತತ ನಾಲ್ಕು ಹೆಣ್ಣು ಮಕ್ಕಳನ್ನು ಹೆತ್ತಿದ್ದಾಳೆಂಬ ಕಾರಣಕ್ಕೆ ಪತಿಯೊಬ್ಬ ಆಕೆಯನ್ನು ಹತ್ಯೆ ಮಾಡಿರುವ ಘಟನೆ ಗುಜರಾತ್ ನಲ್ಲಿ ನಡೆದಿದೆ.
ಗೋಧ್ರಾ ತಾಲೂಕಿನ ಬಗಿದೋಲ್ ಗ್ರಾಮದಲ್ಲಿ ಮೇ 30 ರ ರಾತ್ರಿ ಈ ಘಟನೆ ನಡೆದಿದ್ದು, ತನ್ನ ಪತ್ನಿ ಹೀತೆಲ್ ಪರ್ಮಾರ್ ಳನ್ನು ಬಾವಿಗೆ ತಳ್ಳಿ ಆಕೆಯ ಪತಿ ಜಿತೇಂದ್ರ ಹತ್ಯೆ ಮಾಡಿದ್ದಾನೆ. ದಂಪತಿಗಳಿಗೆ ನಾಲ್ಕು ಮಂದಿ ಹೆಣ್ಣು ಮಕ್ಕಳಿದ್ದು, ಹೀಗಾಗಿ ಪತಿ ಜೀತೆಂದ್ರ ಮತ್ತವನ ಕುಟುಂಬ ಸದಸ್ಯರು ಸದಾ ಹಿತೇಲ್ ಪರ್ಮಾರ್ ಳನ್ನು ಹಿಂಸಿಸುತ್ತಿದ್ದರೆಂದು ಹೇಳಲಾಗಿದೆ.
ಘಟನೆ ನಡೆದ ದಿನದಂದು ಆಕೆಯ ಜೊತೆ ಮತ್ತೇ ಜಗಳ ಆರಂಭಿಸಿದ ಜಿತೇಂದ್ರ, ಗಂಡು ಮಗುವನ್ನು ಹೆರಲು ಸಾಮರ್ಥ್ಯವಿಲ್ಲದ ನೀನು ಬದುಕಿರಲು ಅರ್ಹಳಲ್ಲವೆಂದು ಹೇಳಿ ಈ ಅಮಾನವೀಯ ಕೃತ್ಯವೆಸಗಿದ್ದಾನೆ. ಹೀತೆಲ್ ಪರ್ಮಾರ್ ಪೋಷಕರು, ಪೊಲೀಸರಿಗೆ ದೂರು ನೀಡುತ್ತಿದ್ದಂತೆಯೇ ಜಿತೇಂದ್ರ ಪರಾರಿಯಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆತನ ಪತ್ತೆಗಾಗಿ ಬಲೆ ಬೀಸಿದ್ದಾರೆ.