ಬೆಂಗಳೂರು: ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಾಮೂಹಿಕ ರಜೆ ಹಾಕುವ ಮೂಲಕ ಪೊಲೀಸರು ಪ್ರತಿಭಟನೆ ನಡೆಸಲು ಮುಂದಾಗಿದ್ದರಾದರೂ, ಸರ್ಕಾರ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಎಂದಿನಂತೆ ಪೊಲೀಸರು ಕರ್ತವ್ಯಕ್ಕೆ ಹಾಜರಾಗಿದ್ದು, ಬಹುತೇಕ ಕಡೆಗಳಲ್ಲಿ ಪೊಲೀಸರ ಮುಷ್ಕರಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವು ಜಿಲ್ಲೆಗಳಲ್ಲಿ ಪೊಲೀಸರು ಧರಣಿ ಕೈ ಬಿಟ್ಟಿದ್ದು, ಕೆಲಸಕ್ಕೆ ಹಾಜರಾಗಿದ್ದಾರೆ. ಮತ್ತೆ ಕೆಲವು ಕಡೆಗಳಲ್ಲಿ ಪೊಲೀಸ್ ಕುಟುಂಬದವರು ಪ್ರತಿಭಟನೆ ನಡೆಸಲಿದ್ದಾರೆ ಎಂದು ಹೇಳಲಾಗಿದ್ದು, ಪೊಲೀಸ್ ಅಧಿಕಾರಿಗಳು ಅವರ ಮನವೊಲಿಸಿ, ಪ್ರತಿಭಟನೆ ನಡೆಸದಂತೆ ಮನವಿ ಮಾಡಿದ್ದಾರೆ.
ಎಲ್ಲಾ ಪೊಲೀಸರಿಗೆ ಮುಷ್ಕರ ನಡೆಸದಂತೆ ಇಲಾಖೆಯ ಅಧಿಕಾರಿಗಳು ಮನವೊಲಿಸಿದ್ದು, ಮುಷ್ಕರದಲ್ಲಿ ಭಾಗಿಯಾದರೆ, ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಕಠಿಣ ಕ್ರಮ ಕೈಗೊಳ್ಳಲಿರುವ ಹಿನ್ನಲೆಯಲ್ಲಿ ಪೊಲೀಸರು ಎಂದಿನಂತೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ ಎಂದು ಹೇಳಲಾಗಿದೆ.