ಲಖ್ನೋ: ಉತ್ತರ ಪ್ರದೇಶದ ದಾದ್ರಿ ಹತ್ಯೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಪ್ರಕರಣದಲ್ಲಿ ಹತ್ಯೆಗೀಡಾಗಿದ್ದ ಇಕ್ಲಾಖ್ ಅವರ ಮನೆಯ ಫ್ರೀಜರ್ ನಲ್ಲಿ ಸಿಕ್ಕಿದ್ದು, ಕುರಿ ಮಾಂಸವಲ್ಲ, ಬೀಫ್ ಎಂದು ಹೇಳಲಾಗಿದೆ.
ಮಥುರಾದ ವಿಧಿವಿಜ್ಞಾನ ಪ್ರಯೋಗಾಲಯ ಇದನ್ನು ದೃಢಪಡಿಸಿದೆ. ಇಕ್ಲಾಖ್ ಮನೆಯ ಫ್ರೀಜರ್ ನಲ್ಲಿ ಸಂಗ್ರಹಿಸಿದ್ದ ಮಾಂಸದ ಕುರಿತಾಗಿ ಮಥುರಾ ವಿಧಿ ವಿಜ್ಞಾನ ಪ್ರಯೋಗಾಲಯ ತಜ್ಞರು ಪರೀಕ್ಷೆ ನಡೆಸಿದ್ದು, ಅದು ದನದ ಇಲ್ಲವೇ ಕರುವಿನ ಮಾಂಸವಾಗಿದೆ ಎಂದು ದೃಢಪಡಿಸಿದ್ದಾರೆ. ದಾದ್ರಿಯ ಇಕ್ಲಾಖ್ ಮನೆಯಲ್ಲಿ ಗೋ ಮಾಂಸ ಸಂಗ್ರಹಿಸಲಾಗಿದೆ ಎಂಬ ವದಂತಿಯ ಹಿನ್ನೆಲೆಯಲ್ಲಿ ಕಳೆದ ಸೆಪ್ಟಂಬರ್ ನಲ್ಲಿ ಅವರ ಮನೆ ಮೇಲೆ ದಾಳಿ ಮಾಡಲಾಗಿತ್ತು.
ದಾಳಿ ಮಾಡಿದ್ದ ಗುಂಪು, ಇಕ್ಲಾಖ್ ಅವರನ್ನು ಹೊಡೆದು ಸಾಯಿಸಿತ್ತು. ಈ ಪ್ರಕರಣ ವಿವಾದಕ್ಕೆ ಕಾರಣವಾಗಿ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ರಾಜಕೀಯ ಆರೋಪ, ಪ್ರತ್ಯಾರೋಪಗಳಿಗೆ ಕಾರಣವಾಗಿತ್ತು. ಮೊದಲು ಇದು ಕುರಿ ಮಾಂಸ ಎಂದು ಹೇಳಲಾಗಿತ್ತಾದರೂ, ಈಗ ಬೀಫ್ ಎಂದು ದೃಢಪಡಿಸಲಾಗಿದೆ.