ಸುಲಭವಾಗಿ ಸಾಲ ಪಡೆಯಬೇಕೇ? ಹಾಗಾದ್ರೆ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚೆಚ್ಚು ಜನರನ್ನು ಪರಿಚಯಿಸಿಕೊಳ್ಳಿ ಹಾಗೂ ಜನಪ್ರಿಯತೆ ಪಡೆಯಿರಿ ಎನ್ನುತ್ತಿದೆ ಸದ್ಯದ ಟ್ರೆಂಡ್. ಹೌದು, ಸಾಮಾಜಿಕ ಜಾಲತಾಣದಲ್ಲಿ ನೀವು ಎಷ್ಟು ಫೇಮಸ್ ಎಂಬುದರ ಆಧಾರದ ಮೇಲೆ ವಿಶ್ವಾಸಾರ್ಹತೆಯನ್ನು ಅಳೆಯುವ ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳು ಅದರ ಆಧಾರದ ಮೇಲೆ ಸಾಲ ನೀಡುತ್ತಿವೆ ಎನ್ನಲಾಗಿದೆ.
ಇದಕ್ಕೆ ಪೂರಕವೆಂಬಂತೆ ಪುಣೆ, ಬೆಂಗಳೂರು, ಮತ್ತು ಚೆನ್ನೈನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅರ್ಲಿ ಸ್ಯಾಲರಿ ಎಂಬ ಹಣಕಾಸು ಸಂಸ್ಥೆ, ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತಿ ಹೊಂದಿರುವ ಜನಪ್ರಿಯತೆಯನ್ನು ಆಧರಿಸಿ 90 ದಿನಗಳ ಅವಧಿಯಲ್ಲಿ 1.40 ಕೋಟಿ ರೂ. ಸಾಲ ನೀಡಿದೆ.
ಈಗ ಸಾಲ ಪಡೆಯಲು ಬೇಕಾಗಿರುವುದು ಯಾವುದೇ ಮನೆ, ಸೈಟ್ ಪತ್ರ ಅಲ್ಲ. ಬದಲಾಗಿ ಸಾಮಾಜಿಕ ಜಾಲತಾಣಗಳಲ್ಲಿ ಎಷ್ಟು ಫೇಮಸ್ ಅಂತ ತೋರಿಸಿಕೊಡಬೇಕು ಅಷ್ಟೇ. ಫೇಸ್ಬುಕ್, ಲಿಂಕ್ಡಿನ್ ಹಾಗೂ ಗೂಗಲ್ ಪ್ಲಸ್ ನಲ್ಲಿರುವ ಸ್ನೇಹಿತರು ಮತ್ತು ಸಹೋದ್ಯೋಗಿಗಳ ನಡುವೆ ನೀವೆಷ್ಟು ಜನಪ್ರಿಯರು ಎಂಬುದರ ಆಧಾರದ ಮೇಲೆ ಸಾಲ ನೀಡಲಾಗುತ್ತದೆ ಎನ್ನಲಾಗಿದೆ.