ಕುಖ್ಯಾತ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಜೊತೆ ಸಂಪರ್ಕದಲ್ಲಿದ್ದಾರೆಂದು ಆರೋಪಿಸಲಾಗಿದ್ದ ಮಹಾರಾಷ್ಟ್ರ ಸಚಿವ ಏಕನಾಥ್ ಖಾಡ್ಸೆ, ಈ ಆರೋಪವನ್ನು ತಳ್ಳಿ ಹಾಕಿದ್ದರೂ ಅವರ ಸಂಕಷ್ಟ ತಪ್ಪಿಲ್ಲ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ ವರಿಷ್ಟರು ವರದಿ ಕೇಳಿದ್ದಾರೆಂದು ಹೇಳಲಾಗಿದೆ.
ದಾವೂದ್ ಇಬ್ರಾಹಿಂ ಜೊತೆ ಹಲವಾರು ಬಾರಿ ದೂರವಾಣಿಯಲ್ಲಿ ಮಾತನಾಡಿರುವ ಕುರಿತು ಮಾಹಿತಿ ಬಹಿರಂಗವಾಗುತ್ತಿದ್ದಂತೆಯೇ ಇದಕ್ಕೆ ಸ್ಪಷ್ಟನೆ ನೀಡಿದ್ದ ಸಚಿವ ಏಕನಾಥ್ ಖಾಡ್ಸೆ, ತಾವು ದಾವೂದ್ ಇಬ್ರಾಹಿಂ ಜೊತೆ ಸಂಪರ್ಕದಲ್ಲಿಲ್ಲವೆಂದು ಹೇಳಿದ್ದರಲ್ಲದೇ ತಮ್ಮ ಟೆಲಿಫೋನ್ ಟ್ಯಾಪಿಂಗ್ ಆಗಿರಬಹುದೆಂದು ತಿಳಿಸಿದ್ದರು.
ಆದರೆ ಏಕನಾಥ್ ಖಾಡ್ಸೆ ಅವರ ಮೇಲಿರುವ ಆರೋಪವನ್ನು ಗಂಭೀರವಾಗಿ ಪರಗಣಿಸಿರುವ ಬಿಜೆಪಿ ವರಿಷ್ಟರು, ರಾಜ್ಯ ಘಟಕದಿಂದ ವರದಿ ಕೇಳಿದ್ದಾರೆಂದು ಹೇಳಲಾಗಿದೆ. ಅಲ್ಲದೇ ಸಚಿವರೊಬ್ಬರ ಮೇಲೆ ಇಂತಹ ಗುರುತರ ಆರೋಪ ಕೇಳಿ ಬಂದಿರುವ ಕಾರಣ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸರ್ಕಾರದ ಇಮೇಜ್ ಗೆ ಧಕ್ಕೆ ಬರಬಹುದೆಂಬ ಕಾರಣಕ್ಕೆ ಏಕನಾಥ್ ಖಾಡ್ಸೆಯವರ ಸಚಿವ ಸ್ಥಾನಕ್ಕೆ ಕುತ್ತು ಬರುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.