ಟೋಕಿಯೋ: ಜಪಾನ್ ನ ಹಿರೋಷಿಮಾ, ನಾಗಾಸಾಕಿ ನಗರಗಳ ಮೇಲೆ ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಪರಮಾಣು ಬಾಂಬ್ ಎಸೆಯಲಾಗಿದ್ದು, ಇದನ್ನು ಮನುಕುಲದ ಮಹಾದುರಂತ ಎಂದೇ ಕರೆಯಲಾಗುತ್ತದೆ.
ದುರಂತದಲ್ಲಿ ಲಕ್ಷಾಂತರ ಮಂದಿ ಸಾವನ್ನಪ್ಪಿದ್ದರು. ಇಂತಹ ದುರಂತ ನಡೆದು ಇಷ್ಟು ವರ್ಷಗಳಾದರೂ, ಅಮೆರಿಕದ ಅಧ್ಯಕ್ಷರಾದವರು ಯಾರೂ ಅಲ್ಲಿಗೆ ಭೇಟಿ ಕೊಟ್ಟಿರಲಿಲ್ಲ. ಇದೇ ಮೊದಲ ಬಾರಿಗೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಹಿರೋಷಿಮಾ ನಗರಕ್ಕೆ ಭೇಟಿ ನೀಡುವ ಮೂಲಕ ಇತಿಹಾಸ ಸೃಷ್ಠಿಸಿದ್ದಾರೆ. ದುರಂತದಲ್ಲಿ ಮಡಿದವರ ಸ್ಮಾರಕ ಸ್ಥಳಕ್ಕೆ ಭೇಟಿ ನೀಡಿದ ಒಬಾಮಾ, ಹೂಗುಚ್ಛ ಇರಿಸಿ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಹಿರೋಷಿಮಾ ದುರಂತದಲ್ಲಿ ಮೃತರಾದವರಿಗೆ ಶಾಂತಿ ಸಿಗಲಿ. ಇಂತಹ ದುರಂತಗಳೆಂದು ಮರುಕಳಿಸದಿರಲಿ ಎಂದು ಹೇಳಿದ್ದು, ಅಣ್ವಸ್ತ್ರ ಮುಕ್ತವಾಗಿಸಿ ವಿಶ್ವದಲ್ಲಿ ಶಾಂತಿ ನೆಲೆಸಲು ಎಲ್ಲರೂ ಒಂದಾಗಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.