ಕನ್ನಡ ಸಿನಿಮಾಗಳಿಗೆ ಮಾರುಕಟ್ಟೆಯಿಲ್ಲ, ಸೀಮಿತ ಮಾರುಕಟ್ಟೆ ಇರುವುದರಿಂದ ಕೋಟಿಗಟ್ಟಲೆ ಬಂಡವಾಳ ಹೂಡಲು ಹಿಂದೇಟು ಹಾಕಬೇಕಾಗುತ್ತದೆ ಎಂಬ ಮಾತು ಈಗ ದೂರವಾಗಿದೆ. ಹಿಂದೆಲ್ಲಾ ಕೆಲವು ನಿರ್ಮಾಪಕರು ಮಾತ್ರ ಹೆಚ್ಚಿನ ಬಂಡವಾಳ ಹೂಡುತ್ತಿದ್ದರು.
ಬರಬರುತ್ತಾ ಕನ್ನಡ ಸಿನಿಮಾ ಮಾರುಕಟ್ಟೆಯೂ ಬದಲಾಗತೊಡಗಿದೆ. ಇಲ್ಲಿಯೂ ಕೋಟಿಗಟ್ಟಲೇ ಬಂಡವಾಳ ಹೂಡಲಾಗುತ್ತಿದೆ. ಅದರಲ್ಲಿಯೂ ಬಿಗ್ ಸ್ಟಾರ್ ಸಿನಿಮಾಗಳಿಗೆ ಕೋಟಿಗಳು ಲೆಕ್ಕವಿಲ್ಲದಂತಾಗಿದೆ. ಭಾರೀ ಬಜೆಟ್ ಸಿನಿಮಾಗಳು ಸದ್ದು ಮಾಡುತ್ತಿದ್ದು, ಸಾಮಾನ್ಯ ಚಿತ್ರಗಳಿಗೂ ಕೋಟಿ ವೆಚ್ಛ ಮಾಡಲಾಗುತ್ತಿದೆ. ಅದ್ಧೂರಿ ಮೇಕಿಂಗ್ ಕನ್ನಡದಲ್ಲಿ ಕಾಮನ್ ಆಗಿದೆ. ಕನ್ನಡದ ಸಿನಿಮಾಗಳು ಗಡಿಯಾಚೆಗೂ ಸೌಂಡ್ ಮಾಡುತ್ತಿವೆ.
ಶಿವರಾಜ್ ಕುಮಾರ್, ಸುದೀಪ್, ದರ್ಶನ್, ಪುನೀತ್ ರಾಜ್ ಕುಮಾರ್, ಯಶ್ ಸೇರಿದಂತೆ ಹಲವು ನಟರ ಚಿತ್ರಗಳು ಮಾತ್ರವಲ್ಲ, ಬೇರೆ ನಾಯಕರ ಚಿತ್ರಗಳಿಗೂ ನಿರ್ಮಾಪಕರು ಕೋಟಿಗಟ್ಟಲೆ ಬಂಡವಾಳ ಹೂಡುತ್ತಿದ್ದಾರೆ.
ದರ್ಶನ್ ಅಭಿನಯದ ಸಂಗೊಳ್ಳಿ ರಾಯಣ್ಣ ಕನ್ನಡದ ದುಬಾರಿ ಬಜೆಟ್ ಸಿನಿಮಾ ಎಂದು ಹೇಳಲಾಗಿತ್ತು. ಯಶ್ ಅಭಿನಯದ ‘ಕೆ.ಜಿ.ಎಫ್.’ 50 ಕೋಟಿ ರೂ. ಬಜೆಟ್ ಸಿನಿಮಾ ಎಂದು ಹೇಳಲಾಗುತ್ತಿದೆ. ಬೇರೆ ನಟರ ಚಿತ್ರಗಳೂ ಹತ್ತು ಹಲವು ಕೋಟಿ ವೆಚ್ಛದಲ್ಲಿ ನಿರ್ಮಾಣವಾಗುತ್ತಿವೆ. ನಟರ ಸಂಭಾವನೆ ಕೂಡ ಹೆಚ್ಚಾಗಿದೆ. ಕನ್ನಡದ ಸಿನಿಮಾ ಮಾರುಕಟ್ಟೆ ವಿಸ್ತಾರವಾಗಿದ್ದು, ಬಂಡವಾಳ ಹೂಡಿಕೆ ಹೆಚ್ಚಾಗಿದೆ ಎನ್ನಲಾಗಿದೆ.