ಆತ ಬಹು ಬೇಡಿಕೆಯ ನಟ. ಬಾಲಿವುಡ್ ಮಾತ್ರವಲ್ಲದೇ ದಕ್ಷಿಣ ಭಾರತದ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಬಹುತೇಕ ಚಿತ್ರಗಳಲ್ಲಿ ಖಳನಾಯಕನ ಪಾತ್ರದಲ್ಲಿ ಅಬ್ಬರಿಸಿರುವ ಅವರು ಈಗ ‘ಬಿಗ್ ಬಾಸ್’ ಸೀಸನ್ 10 ರಲ್ಲಿ ಸ್ಪರ್ಧಿಯಾಗಿದ್ದಾರೆ.
ಹೌದು, ಸ್ಯಾಂಡಲ್ ವುಡ್ ಸೇರಿದಂತೆ ಹಲವು ಭಾಷೆಗಳ ಚಿತ್ರದಲ್ಲಿ ಅಭಿನಯಿಸಿರುವ ರಾಹುಲ್ ದೇವ್, ಸಲ್ಮಾನ್ ಖಾನ್ ನಡೆಸಿಕೊಡುವ ‘ಬಿಗ್ ಬಾಸ್’ ಸೀಸನ್ 10 ರ ಸ್ಪರ್ಧಿಯಾಗಿದ್ದಾರೆ. ಈ ಹಿಂದೆಯೂ ಅವರಿಗೆ ‘ಬಿಗ್ ಬಾಸ್’ ಸ್ಪರ್ಧಿಯಾಗಲು ಆಫರ್ ಬಂದಿತ್ತಾದರೂ ಅದನ್ನು ನಿರಾಕರಿಸಿ ಈ ಬಾರಿ ಸ್ಪರ್ಧಿಯಾಗಲು ಬಂದದ್ದೇಕೆ ಎಂಬ ಕಾರಣವನ್ನು ಬಹಿರಂಗಪಡಿಸಿದ್ದಾರೆ.
ತಮ್ಮ ಪುತ್ರ ಸಿದ್ದಾರ್ಥ್, ವಿದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದು, ಆತನಿಗಾಗಿ ತಾವು ಈ ಸ್ಪರ್ಧೆಯಲ್ಲಿ ಪಾಲ್ಗೊಂಡಿರುವುದಾಗಿ ರಾಹುಲ್ ದೇವ್ ಹೇಳಿದ್ದಾರೆ. ಆತನ ವ್ಯಾಸಂಗಕ್ಕಾಗಿ ತಮಗೆ ಹಣಕಾಸಿನ ಅಗತ್ಯವಿದ್ದು, ‘ಬಿಗ್ ಬಾಸ್’ ನಲ್ಲಿ ಈ ಬಾರಿ ಹೆಚ್ಚಿನ ಹಣ ನೀಡುವುದಾಗಿ ಹೇಳಿದ ಕಾರಣ ಪಾಲ್ಗೊಳ್ಳುತ್ತಿರುವುದಾಗಿ ಯಾವುದೇ ಮುಚ್ಚುಮರೆಯಿಲ್ಲದೇ ಹೇಳಿಕೊಂಡಿದ್ದಾರೆ.
ತೆರೆಯ ಮೇಲೆ ತಾವು ಖಳನಾಯಕನಾಗಿ ಅಬ್ಬರಿಸಿದರೂ ನಿಜ ಜೀವನದಲ್ಲಿ ಎಲ್ಲರಂತೆ ಸಾಮಾನ್ಯ ಮನುಷ್ಯ. ನನ್ನ ಮಗನ ಭವಿಷ್ಯ ತಮಗೆ ಮುಖ್ಯವಾಗಿದ್ದು, ಆತನ ಉನ್ನತ ವ್ಯಾಸಂಗಕ್ಕೆ ಹಣದ ಅಗತ್ಯವಿರುವ ಕಾರಣ ಸ್ಪರ್ಧೆಯಲ್ಲಿ ಭಾಗವಹಿಸಿದ್ದೇನೆ. ‘ಬಿಗ್ ಬಾಸ್’ ಮನೆಯಲ್ಲಿ ಎಷ್ಟು ದಿನ ಇರುತ್ತೇನೋ ಗೊತ್ತಿಲ್ಲ. ಆದರೆ ನಾನ್ಯಾವ ಲೆಕ್ಕಾಚಾರ ಹಾಕಿಕೊಂಡು ‘ಬಿಗ್ ಬಾಸ್’ಮನೆ ಪ್ರವೇಶಿಸುತ್ತಿಲ್ಲವೆಂದಿದ್ದಾರೆ ರಾಹುಲ್ ದೇವ್.