ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೋರೇಷನ್ ನ ಬಿಲ್ ಕಲೆಕ್ಟರ್ ಒಬ್ಬನ ಮನೆ ಮೇಲೆ ದಾಳಿ ಮಾಡಿದ್ದ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು, ಆತ ಗಳಿಸಿದ್ದ ಆಸ್ತಿಯನ್ನು ಕಂಡು ದಂಗಾಗಿ ಹೋಗಿದ್ದಾರೆ.
ನರಸಿಂಹ ರೆಡ್ಡಿ ಎಂಬ ಈ ಬಿಲ್ ಕಲೆಕ್ಟರ್ ಹೆಚ್.ಎಂ.ಟಿ ಶಾತವಾಹನ ನಗರದಲ್ಲಿ ಮೂರಂತಸ್ತಿನ ಮನೆ, ಕಲ್ಯಾಣ ನಗರ್ ಮತ್ತು ಬಾಲನಗರ್ ನಲ್ಲಿ ಒಂದಂಸ್ತಿನ ಮನೆಗಳು, ಕುಕ್ಕಟಪಲ್ಲಿಯಲ್ಲಿ ಎರಡಂತಸ್ತಿನ ಮನೆ ಹಾಗೂ ಏಳು ನಿವೇಶನಗಳನ್ನು ಹೊಂದಿದ್ದಾನೆ.
ಇಷ್ಟಕ್ಕೆ ಈತ ಗಳಿಸಿರುವ ಆಸ್ತಿ ವಿವರ ಮುಗಿದಿಲ್ಲ. ನಂಗ್ನೂರ್ ಗ್ರಾಮದಲ್ಲಿ 35 ಎಕರೆ ಕೃಷಿ ಭೂಮಿ, ಚೆರಿಯಾಲಾದಲ್ಲಿ 1 ಎಕರೆ ಭೂಮಿ, ಅಂದಾಜು 56 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳು, 3.7 ಕೆ.ಜಿ. ಬೆಳ್ಳಿ, ಎರಡು ಬೈಕ್, ಎರಡು ಟ್ರ್ಯಾಕ್ಟರ್, ಒಂದು ಕಾರ್, 34 ಲಕ್ಷ ರೂ. ಮೌಲ್ಯದ ಜೀವವಿಮೆ ಪಾಲಿಗಳನ್ನು ಹೊಂದಿದ್ದ.
ನರಸಿಂಹ ರೆಡ್ಡಿ, ತನ್ನ ಬಹುತೇಕ ಆಸ್ತಿಯನ್ನು ಸಂಬಂಧಿಕರ ಹೆಸರಿನಲ್ಲಿ ಮಾಡಿದ್ದು, ಈತನ ಇಬ್ಬರು ಮಕ್ಕಳು ವಿದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆಂದು ಹೇಳಲಾಗಿದೆ. 1987 ರಲ್ಲಿ ಸೇವೆಗೆ ಸೇರಿದ್ದ ನರಸಿಂಹ ರೆಡ್ಡಿ, 2001 ರಲ್ಲಿ ಬಿಲ್ ಕಲೆಕ್ಟರ್ ಆಗಿ ಪ್ರಮೋಷನ್ ಪಡೆದಿದ್ದ. ತೆರಿಗೆ ನಿಗದಿಪಡಿಸುವ ಜವಾಬ್ದಾರಿ ಈತನಿಗಿದ್ದು, ವಾಣಿಜ್ಯ ಕಟ್ಟಡಗಳ ಮಾಲೀಕರಿಂದ ಹಣ ಪಡೆದು ಅವುಗಳನ್ನು ಗೃಹೋಪಯೋಗಿ ಕಟ್ಟಡಗಳೆಂದು ನಮೂದಿಸುತ್ತಿದ್ದನೆನ್ನಲಾಗಿದೆ. ವಾಣಿಜ್ಯ ಕಟ್ಟಡಗಳಿಗೆ ತೆರಿಗೆ ಅಧಿಕವಿರುವ ಕಾರಣ ಈತನಿಂದ ಉಪಯೋಗ ಪಡೆದವರು ಲಕ್ಷಗಟ್ಟಲೆ ಹಣವನ್ನು ಲಂಚವಾಗಿ ನೀಡುತ್ತಿದ್ದರೆನ್ನಲಾಗಿದೆ. ಇದೀಗ ನರಸಿಂಹ ರೆಡ್ಡಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.