ಮೈಸೂರು: ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಸಿ.ಎಂ. ಇಬ್ರಾಹಿಂ ನೀಡಿದ ಹೇಳಿಕೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ತಿರುಗೇಟು ನೀಡಿದ್ದಾರೆ.
ಸಿದ್ಧರಾಮಯ್ಯ ನಿರೀಕ್ಷೆ ಹುಸಿಗೊಳಿಸಿದ್ದಾರೆ. ಅವರ ಆಡಳಿತ ತೃಪ್ತಿಕರವಾಗಿಲ್ಲ. ಜನಸಾಮಾನ್ಯರಿಗೆ ಭದ್ರತೆ ಕಡಿಮೆಯಾಗಿದೆ. ಸಿದ್ಧರಾಮಯ್ಯ ಬದಲಾಗಿದ್ದಾರೆ. ಅವರ ಕೆಲಸದ ಬಗ್ಗೆ ತೃಪ್ತಿ ಇಲ್ಲ ಎಂದೆಲ್ಲಾ ನಿನ್ನೆ ಮೈಸೂರಿನಲ್ಲಿ ಇಬ್ರಾಹಿಂ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದರು. ಇದಕ್ಕೆ ಸಿದ್ಧರಾಮಯ್ಯ ಖಾರವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ.
ಯಾರನ್ನೂ ತೃಪ್ತಿ ಪಡಿಸಲು ಆಗುವುದಿಲ್ಲ. ಕೆಲವರಿಗೆ ಏನು ಮಾಡಿದರೂ ಅತೃಪ್ತರಾಗಿಯೇ ಇರುತ್ತಾರೆ ಎಂದು ಇಬ್ರಾಹಿಂ ಅವರಿಗೆ ಟಾಂಗ್ ಕೊಟ್ಟಿದ್ದಾರೆ. ಮೈಸೂರಿನಲ್ಲಿ ಇಬ್ರಾಹಿಂ ಕುರಿತ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಿದ್ಧರಾಮಯ್ಯ, ಕೆಲವರಿಗೆ ತೃಪ್ತಿ ಆಗುವುದೇ ಇಲ್ಲ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಬರಗಾಲದಿಂದ ಬೆಳೆ ನಷ್ಟವಾಗಿದೆ, ಈ ಕುರಿತಂತೆ ಸಂಪೂರ್ಣ ವರದಿ ಬಂದ ನಂತರ ಕಂದಾಯ ಸಚಿವರು ದೆಹಲಿಗೆ ತೆರಳಿ ಕೇಂದ್ರಕ್ಕೆ ಮನವಿ ಸಲ್ಲಿಸಲಿದ್ದಾರೆ. ವರದಿ ಬಳಿಕ ಕೇಂದ್ರದಿಂದ ಹೆಚ್ಚಿನ ಅನುದಾನ ಪಡೆಯಲಾಗುವುದು ಎಂದು ತಿಳಿಸಿದ್ದಾರೆ.
ಪೊಲೀಸ್ ಸಿಬ್ಬಂದಿ ವೇತನ ಹೆಚ್ಚಳಕ್ಕೆ ಸಂಬಂಧಿಸಿದಂತೆ ರಾಘವೇಂದ್ರ ಔರಾದ್ಕರ್ ಸಮಿತಿ ವರದಿ ನೀಡಿದೆ. ಬೇರೆ ರಾಜ್ಯಗಳಲ್ಲಿನ ಪೊಲೀಸರ ವೇತನ ಆಧರಿಸಿ ರಾಜ್ಯದಲ್ಲಿಯೂ ಪೊಲೀಸರ ವೇತನ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದ್ದಾರೆ.