ಮುಂಬೈ ನಕಲಿ ಕಾಲ್ ಸೆಂಟರ್ ಜಾಲದ ಒಂದೊಂದೇ ಕರಾಳ ಮುಖಗಳು ಬಯಲಾಗುತ್ತಿವೆ. ನಕಲಿ ಕಾಲ್ ಸೆಂಟರ್ ಜಾಲದ ಒಟ್ಟಾರೆ ವಹಿವಾಟು ಸುಮಾರು 500 ಕೋಟಿ ಅಂತಾ ಥಾಣೆ ಪೊಲೀಸರು ಅಂದಾಜಿಸಿದ್ದರು, ಆದ್ರೆ ಅವರ ಲೆಕ್ಕಾಚಾರ ತಲೆಕೆಳಗಾಗಿದೆ. ಅಹಮದಾಬಾದ್ ಒಂದರಲ್ಲೇ ವರ್ಷಕ್ಕೆ ವಂಚಕರು 1000 ಕೋಟಿ ರೂಪಾಯಿ ಲಾಭ ಗಳಿಸಿದ್ದಾರೆ ಎನ್ನಲಾಗ್ತಿದೆ.
ಅಹಮದಾಬಾದ್ ನಲ್ಲಿ ನಕಲಿ ಕಾಲ್ ಸೆಂಟರ್ ಜಾಲದ ಕಿಂಗ್ ಪಿನ್ ಸಾಗರ್ ಥಕ್ಕರ್ ಸುಮಾರು 70 ಇಂತಹ ಫೇಕ್ ಸೆಂಟರ್ ಗಳ ಮಾಲೀಕನಾಗಿದ್ದ. ಅಮೆರಿಕದ ಆಂತರಿಕ ಕಂದಾಯ ಸೇವೆ ಅಧಿಕಾರಿಗಳೆಂದು ಹೇಳಿಕೊಂಡು ಅಲ್ಲಿನ ಪ್ರಜೆಗಳಿಂದ ಸಾವಿರಾರು ಡಾಲರ್ ವಸೂಲಿ ಮಾಡುವುದೇ ವಂಚಕರ ಕಾಯಕವಾಗಿತ್ತು.
ಗುಜರಾತ್ ನ ವಡೋದರಾ ಸೇರಿದಂತೆ ಹಲವು ನಗರಗಳಿಗೂ ಈ ಮೋಸದ ಜಾಲ ವಿಸ್ತರಿಸಲು ಸಾಗರ್ ಪ್ಲಾನ್ ಮಾಡಿದ್ದ. ಇವನು ನಡೆಸುತ್ತಿದ್ದ ಪ್ರತಿಯೊಂದು ಕಾಲ್ ಸೆಂಟರ್ ನ ತಿಂಗಳ ವಹಿವಾಟು 2 ಕೋಟಿ ರೂಪಾಯಿ ಇತ್ತು. ಮುಂಬೈನಲ್ಲಿ ಥಾಣೆ ಪೊಲೀಸರು ದಾಳಿ ಮಾಡ್ತಿದ್ದಂತೆ ಎಚ್ಚೆತ್ತುಕೊಂಡ ಸಾಗರ್, 70 ನಕಲಿ ಕಾಲ್ ಸೆಂಟರ್ ಗಳ ಪೈಕಿ 55ನ್ನು ಮುಚ್ಚಿದ್ದ. ಸದ್ಯ ಥಾಣೆ ಪೊಲೀಸರ 2 ತಂಡ ಅಹಮದಾಬಾದ್ ನಲ್ಲಿ ಬೀಡುಬಿಟ್ಟಿದೆ. ನಕಲಿ ಕಾಲ್ ಸೆಂಟರ್ ಗಳಿಗೆ ಬೀಗ ಜಡಿಯಲು ಮುಂದಾಗಿದೆ.