ಉತ್ತರ ಪ್ರದೇಶದ ಗಾಜಿಯಾಬಾದ್ ನಲ್ಲಿ ಮೊಬೈಲ್ ಕದ್ದಿದ್ದಾರೆಂಬ ಶಂಕೆ ಮೇಲೆ ನಾಲ್ವರ ಖಾಸಗಿ ಅಂಗಗಳಿಗೆ ಪೆಟ್ರೋಲ್ ಇಂಜೆಕ್ಷನ್ ನೀಡಿದ ಅಮಾನುಷ ಘಟನೆ ನಡೆದಿದೆ. ರಿಜ್ಜು ಎಂಬಾತ ಅಕ್ಟೋಬರ್ 14ರಂದು ತನ್ನ ಮೊಬೈಲ್ ಕಳೆದುಕೊಂಡಿದ್ದ, ಈತ ಸಮಾಜವಾದಿ ಪಕ್ಷದ ಸ್ಥಳೀಯ ಮುಖಂಡನ ಸಹೋದರ, ಹಾಲಿನ ಡೈರಿಯೊಂದನ್ನು ಇಟ್ಕೊಂಡಿದ್ದಾನೆ.
ರಿಜ್ಜುಗೆ ತನ್ನ ಮೊಬೈಲ್ ಅನ್ನು ಜಹೀರ್ ಬೇಗ್, ಗುಲ್ಜಾರ್, ಫಿಮೊ ಹಾಗೂ ಫಿರೋಜ್ ಕದ್ದಿರಬಹುದೆಂಬ ಅನುಮಾನ. ಇವರೆಲ್ಲರೂ ರಿಜ್ಜು ನೆರೆಹೊರೆಯವರು. ಅವರನ್ನೆಲ್ಲ ತನ್ನ ಹಾಲಿನ ಡೈರಿಗೆ ಕರೆಸಿಕೊಂಡ ರಿಜ್ಜು, ಸ್ನೇಹಿತರಾದ ಅಕಿಲ್ ಮತ್ತು ನದೀಮ್ ಜೊತೆ ಸೇರಿ ಹಲ್ಲೆ ಮಾಡಿದ್ದಾನೆ. ನಂತರ ಬೈಕ್ ನಿಂದ ಪೆಟ್ರೋಲ್ ತೆಗೆದು ಯುವಕರ ಖಾಸಗಿ ಅಂಗಗಳಿಗೆ ಇಂಜೆಕ್ಟ್ ಮಾಡಿದ್ದಾನೆ.
ತಾವು ಮೊಬೈಲ್ ಕದ್ದಿಲ್ಲ, ಬಿಟ್ಟುಬಿಡು ಅಂತಾ ಗೋಗರೆದರೂ, ಕೈಮುಗಿದು ಬೇಡಿಕೊಂಡ್ರೂ ರಿಜ್ಜುಗೆ ಕರುಣೆ ಬಂದಿಲ್ಲ. ಒಬ್ಬೊಬ್ಬರಿಗೂ 3-5 ಬಾರಿ ಪೆಟ್ರೋಲ್ ಚುಚ್ಚುಮದ್ದು ನೀಡಿದ್ದಾನೆ, ಮಧ್ಯೆ ಒಂದು ಸಿರಿಂಜ್ ಮುರಿದು ಹೋಗಿದೆ, ಅಂಗಡಿಗೆ ಹೋಗಿ ಇನ್ನೊಂದನ್ನು ತಂದು ಹಿಂಸೆ ಮುಂದುವರಿಸಿದ್ದಾನೆ. ನಾಲ್ವರು ಯುವಕರು ನೋವಿನಿಂದ ಕಿರುಚಿಕೊಂಡಿದ್ದಾರೆ, ಸಹಾಯಕ್ಕಾಗಿ ಅಂಗಲಾಚಿದ್ದಾರೆ. ಕೊನೆಗೆ ರಿಜ್ಜು ಕುಟುಂಬದ ಹಿರಿಯರೊಬ್ಬರು ಬಂದು ಇವರನ್ನೆಲ್ಲ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಕರಣ ಸಂಬಂಧ ಪೊಲೀಸರು ಇಬ್ಬರನ್ನು ಬಂಧಿಸಿದ್ದು, ಇನ್ನೊಬ್ಬನ ಮೇಲೆ ಕೇಸ್ ದಾಖಲಾಗಿದೆ.