ವಿವಾಹ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಶಾಸಕನೊಬ್ಬ ಬಾರ್ ಡ್ಯಾನ್ಸರ್ ಗಳ ಮೇಲೆ ಹಣ ತೂರಿದ್ದಲ್ಲದೇ ಅವರೊಂದಿಗೆ ಅಸಭ್ಯವಾಗಿ ನಡೆದುಕೊಂಡಿದ್ದು, ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಶಾಸಕ ಜಗತ್ರಾಮ್ ಪಾಸ್ವಾನ್, ವಿವಾಹ ಸಮಾರಂಭದಲ್ಲಿ ಪಾಲ್ಗೊಂಡಿದ್ದ ವೇಳೆ ಸಾರ್ವಜನಿಕರ ಸಮ್ಮುಖದಲ್ಲೇ ವೇದಿಕೆ ಮೇಲೆ ನೃತ್ಯ ಮಾಡುತ್ತಿದ್ದ ಡ್ಯಾನ್ಸರ್ ಗಳನ್ನು ತನ್ನ ಬಳಿ ಕರೆಸಿಕೊಂಡು ಅವರ ಮೇಲೆ ಹಣ ತೂರಿದ್ದಾನೆ. ಜೊತೆಗೆ ಅಸಭ್ಯವಾಗಿ ವರ್ತಿಸಿದ್ದಾನೆ.
ವಿವಾಹ ಸಮಾರಂಭದಲ್ಲಿ ಪಾಲ್ಗೊಂಡಿದ್ದವರೊಬ್ಬರು ತಮ್ಮ ಮೊಬೈಲ್ ನಲ್ಲಿ ಈ ದೃಶ್ಯಗಳನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದು, ಅದೀಗ ವೈರಲ್ ಆಗಿದೆ. ಸಮಾಜವಾದಿ ಪಕ್ಷದ ಶಾಸಕನ ಈ ವರ್ತನೆಗೆ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳ ನಾಯಕರು ತೀವ್ರವಾಗಿ ಖಂಡಿಸಿದ್ದು, ಗೂಂಡಾ ಹಾಗೂ ಮಾಫಿಯಾ ಜಗತ್ತಿನಲ್ಲಿರುವವರೇ ಸಮಾಜವಾದಿ ಪಾರ್ಟಿಯಲ್ಲಿ ಅಧಿಕವಾಗಿದ್ದಾರೆಂದಿದ್ದಾರೆ. ವಿಡಿಯೋ ಕುರಿತು ಪ್ರತಿಕ್ರಿಯಿಸಿರುವ ಸಮಾಜವಾದಿ ಪಕ್ಷದ ವಕ್ತಾರರು, ಶಾಸಕ ಜಗತ್ರಾಮ್ ಪಾಸ್ವಾನ್ ಅವರಿಂದ ವಿವರಣೆ ಕೇಳಲಾಗಿದ್ದು, ಬಳಿಕ ಶಿಸ್ತು ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದ್ದಾರೆ.