ಬೆಂಗಳೂರು: ರಾಜ್ಯದಲ್ಲಿ ಕಾವೇರಿ ನದಿ ನೀರಿನ ವಿಚಾರವಾಗಿ, ಹೋರಾಟ ನಡೆದ ಸಂದರ್ಭದಲ್ಲಿ ರಾಕಿಂಗ್ ಸ್ಟಾರ್ ಯಶ್ ದೂರವುಳಿದಿದ್ದರು ಎಂದು ಮಾಧ್ಯಮಗಳಲ್ಲಿ ವರದಿಯಾಗಿದ್ದಕ್ಕೆ ಯಶ್ ಸವಾಲು ಹಾಕಿದ್ದರು.
ಯಾವುದೇ ವಾಹಿನಿ ಪ್ರೈಮ್ ಟೈಮ್ ನಲ್ಲಿ ರೈತರಿಗೆ ಸಂಬಂಧಿಸಿದ ಕಾರ್ಯಕ್ರಮ ರೂಪಿಸಿದ್ದಲ್ಲಿ ಖಂಡಿತಾ ಭಾಗವಹಿಸುತ್ತೇನೆ. ಕನ್ನಡ ನಾಡು, ನುಡಿ ಹೋರಾಟದೊಂದಿಗಿನ ನನ್ನ ಬದ್ಧತೆ ಯಾವಾಗಲೂ ಇರುತ್ತದೆ ಎಂದು ಯಶ್ ಹೇಳಿದ್ದಾರೆ.
ಸಾಮಾಜಿಕ ಕಾಳಜಿಯಿಂದ ವಾಹಿನಿಗಳು ರೈತರ ಕಾರ್ಯಕ್ರಮ ರೂಪಿಸಿದಲ್ಲಿ ಉಚಿತವಾಗಿ ಭಾಗವಹಿಸುತ್ತೇನೆ ಎಂದು ಯಶ್ ಸವಾಲ್ ಹಾಕಿದ್ದನ್ನು ವಾಹಿನಿಯೊಂದು ಸ್ವಾಗತಿಸಿದೆ.
ಸಾಮಾಜಿಕ ಕಳಕಳಿಯಿಂದ ಯಶ್ ಅವರೊಂದಿಗೆ ಚರ್ಚೆಗೆ ನಾವು ಸಿದ್ಧರಿದ್ದೇವೆ. ದಿನಾಂಕ, ಸಮಯವನ್ನು ಅವರೇ ನಿಗದಿಪಡಿಸಲಿ. ನಾಡಿನ ಹಿತಕ್ಕಾಗಿ ನಾವು ಚರ್ಚಗೆ ಸಿದ್ಧ ಎಂದು ವಾಹಿನಿಯೊಂದು ಹೇಳಿತ್ತು. ಇದನ್ನು ಸ್ವೀಕರಿಸಿರುವ ಯಶ್, ವಾಹಿನಿ ರೈತರಿಗಾಗಿ ನಡೆಸಿಕೊಡುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಾಗಿ ಹೇಳಿದ್ದಾರೆ.
ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ವಿಡಿಯೋ ಅಪ್ ಲೋಡ್ ಮಾಡಿರುವ ಯಶ್, ನಾನು ಹೋರಾಟದಲ್ಲಿ ಪಾಲ್ಗೊಂಡಿಲ್ಲ ಎಂದು ಮಾಧ್ಯಮಗಳಲ್ಲಿ ವರದಿಯಾಗಿದ್ದರಿಂದ ಹಾಗೇ ಹೇಳಿದ್ದೇನೆ. ನಾನು ಕನ್ನಡಪರ ಹೋರಾಟಗಳಲ್ಲಿ ಎಂದಿಗೂ ಪಾಲ್ಗೊಳ್ಳುತ್ತೇನೆ. ನಾನು ಅಹಂಕಾರದಿಂದ ಆ ಮಾತನ್ನು ಹೇಳಿದ್ದಲ್ಲ. ರೈತರಿಗೆ ಉಪಯೋಗವಾಗುವ ಎಲ್ಲಾ ವಾಹಿನಿಗಳ ಕಾರ್ಯಕ್ರಮಗಳಲ್ಲಿ ಪಾಳ್ಗೊಳ್ಳುತ್ತೇನೆ. ಟಿ.ವಿ.ಸೇರಿದಂತೆ ಎಲ್ಲಾ ವಾಹಿನಿಗಳ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೇನೆ ಎಂದು ತಿಳಿಸಿದ್ದಾರೆ.