ಪುಣೆ: ರಾಷ್ಟ್ರೀಕೃತ ಬ್ಯಾಂಕ್ ಗಳ ನಕಲಿ ಕ್ರೆಡಿಟ್ ಕಾರ್ಡ್ ತಯಾರಿಸಿ, 94 ಲಕ್ಷ ರೂಪಾಯಿ ವಂಚಿಸಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಹದಸ್ ಪುರದ ಕಮಲ್ ಕಿಶೋರ್ ಹಾಗೂ ಆತನಿಗೆ ನೆರವಾಗಿದ್ದ ಯಾದವೇಂದ್ರ ಪ್ರತಾಪ್ ಬಂಧಿತ ಆರೋಪಿಗಳಾಗಿದ್ದಾರೆ. ಪುಣೆಯಲ್ಲಿ ಕಚೇರಿ ಹೊಂದಿರುವ ಬ್ಯಾಂಕ್ ಒಂದು, ತನ್ನ ಬ್ಯಾಂಕ್ ಸೇರಿದಂತೆ ಬೇರೆ ಹಲವು ಬ್ಯಾಂಕ್ ಗಳ ಕ್ರೆಡಿಟ್ ಕಾರ್ಡ್ ತಯಾರಿಸುವ ಕೆಲಸವನ್ನು ಯರವಾಡದಲ್ಲಿರುವ ಸಾಫ್ಟ್ ವೇರ್ ಕಂಪನಿಗೆ ಹೊರಗುತ್ತಿಗೆ ನೀಡಿತ್ತು.
ಬೇರೆ ಬ್ಯಾಂಕ್ ಗಳ ಕ್ರೆಡಿಟ್ ಕಾರ್ಡ್ ತಯಾರಿಸಿಕೊಡುವ ಜವಾಬ್ದಾರಿ ಪಡೆದುಕೊಂಡಿದ್ದ ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ, ಗ್ರಾಹಕರ ದಾಖಲೆಗಳನ್ನು ಪಡೆದು ನಕಲಿ ಕ್ರೆಡಿಟ್ ಕಾರ್ಡ್ ತಯಾರಿಸಿದ್ದ.
ಅವುಗಳಿಂದ ಹಣ ಡ್ರಾ ಮಾಡಿ ವಂಚಿಸಿದ್ದ. ಈ ಬಗ್ಗೆ ಬ್ಯಾಂಕ್ ಅಧಿಕಾರಿಗಳು ಸಮರ್ಥ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸೈಬರ್ ಪತ್ತೆ ದಳಕ್ಕೆ ವರ್ಗಾಯಿಸಿದ್ದರು. ಇದೀಗ ತನಿಖೆ ನಡೆಸಿ, ಆರೋಪಿಗಳನ್ನು ಬಂಧಿಸಲಾಗಿದೆ.