ನವದೆಹಲಿ: ರಿಲಯನ್ಸ್ ಜಿಯೋ ಸಿಮ್ ದೇಶಾದ್ಯಂತ ಸಂಚಲನ ಮೂಡಿಸಿದ ಬಳಿಕ, ಹಲವು ಮೊಬೈಲ್ ಸೇವಾ ಕಂಪನಿಗಳು ಕೂಡ ಪೈಪೋಟಿಗೆ ಇಳಿದಿವೆ.
ಮೊಬೈಲ್ ಸೇವಾ ಕಂಪನಿಗಳ ನಡುವಿನ ಪೈಪೋಟಿಯಲ್ಲಿ ಗ್ರಾಹಕರಿಗೆ ಅನುಕೂಲವಾಗುತ್ತಿದೆ. ಕೆಲವು ಕಂಪನಿಗಳ ಡೇಟಾ, ಕರೆ ದರಗಳು ಕಡಿಮೆಯಾಗತೊಡಗಿವೆ. ಇಲ್ಲವೇ ಉಚಿತವಾಗಿ ಸಿಗುತ್ತಿವೆ.
ಇದೇ ಸಂದರ್ಭದಲ್ಲಿ ಜಿಯೋ ಸಿಮ್ ಕುರಿತ ಆಘಾತಕಾರಿ ಸುದ್ದಿಯೊಂದು ಹೊರ ಬಿದ್ದಿದೆ. ರಿಲಯನ್ಸ್ ಕಂಪನಿ ಉಚಿತವಾಗಿ ಜಿಯೋ ಸಿಮ್ ವಿತರಿಸುತ್ತಿದೆ ಎಂದು ಹೇಳಿದ್ದರೂ, ಕೆಲವು ಆನ್ ಲೈನ್ ಕಂಪನಿಗಳು ಸಿಮ್ ಮಾರಾಟ ಮಾಡಿ ಸೇವಾ ಶುಲ್ಕದ ಹೆಸರಿನಲ್ಲಿ ಹಣ ಪಡೆದುಕೊಳ್ಳುತ್ತಿವೆ ಎಂಬ ದೂರು ಕೇಳಿ ಬಂದಿವೆ.
ಜಿಯೋ ಸಿಮ್ ಪಡೆಯಲು ಗ್ರಾಹಕರು ಹೆಚ್ಚಿನ ಆಸಕ್ತಿ ತೋರಿದ್ದನ್ನೇ ಕೆಲವು ವರ್ತಕರು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳತೊಡಗಿದ್ದಾರೆ. ಕೆಲವು ಕಡೆಗಳಲ್ಲಿ ರಿಟೇಲ್ ಮಾರಾಟಗಾರರು, 50 ರೂ. ನಿಂದ 500 ರೂ. ವರೆಗೆ ಕಾಳಸಂತೆಯಲ್ಲಿ ಜಿಯೋ ಸಿಮ್ ಮಾರಾಟ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ.