ಟಿವಿ ಖರೀದಿಸಲು ಮಾರಾಟ ಮಳಿಗೆಗೆ ತೆರಳಿದ್ದ ವ್ಯಕ್ತಿಯೊಬ್ಬ ಮಾಡಿದ ಸಣ್ಣ ಯಡವಟ್ಟಿಗೆ ಲಕ್ಷಾಂತರ ಮೌಲ್ಯದ ನಾಲ್ಕು ಟಿವಿ ಸೆಟ್ ಗಳು ಕ್ಷಣ ಮಾತ್ರದಲ್ಲಿ ಪುಡಿಪುಡಿಯಾಗಿವೆ. ಸಿಸಿ ಟಿವಿಯಲ್ಲಿ ಸೆರೆಯಾಗಿರುವ ಈ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, 2.5 ಮಿಲಿಯನ್ ಗೂ ಅಧಿಕ ಮಂದಿ ಇದನ್ನು ವೀಕ್ಷಿಸಿದ್ದಾರೆ.
ಯುನೈಟೆಡ್ ಕಿಂಗ್ಡಂ ನಲ್ಲಿ ಈ ಘಟನೆ ನಡೆದಿದ್ದು, ಗ್ರಾಹಕನೊಬ್ಬ ಅಲ್ಲಿನ HBH Woolacotts ಸ್ಟೋರ್ ಗೆ ತೆರಳಿದ್ದಾನೆ. ಅಲ್ಲಿದ್ದ ವಿವಿಧ ಟಿವಿ ಮಾಡೆಲ್ ಗಳನ್ನು ಪರಿಶೀಲಿಸುತ್ತಿದ್ದ ಆತ ಟಿವಿಯೊಂದನ್ನು ನೋಡಲು ಕೆಳಗೆ ಕುಳಿತಿದ್ದಾನೆ. ಈ ಸಂದರ್ಭದಲ್ಲಿ ಆತ ಆಯತಪ್ಪಿದ್ದು, ಆತನ ಮುಂದಿದ್ದ ಎರಡು ಹಾಗೂ ಹಿಂಬದಿಯಲ್ಲಿದ್ದ ಎರಡು ಟಿವಿಗಳು ಪುಡಿಪುಡಿಯಾಗಿವೆ.
ಸಿಸಿ ಟಿವಿಯಲ್ಲಿ ಸೆರೆಯಾಗಿದ್ದ ಇದರ ದೃಶ್ಯವನ್ನು ಅಕ್ಟೋಬರ್ 13 ರಂದು ಯೂ ಟ್ಯೂಬ್ ನಲ್ಲಿ ಪೋಸ್ಟ್ ಮಾಡಲಾಗಿದ್ದು, ಇದಕ್ಕೆ ನಾನಾ ಕಮೆಂಟ್ ಗಳು ಬಂದಿವೆ. ಕೆಲವರು ಹೀಗಾಗೇ ತಾವು ಆನ್ ಲೈನ್ ನಲ್ಲಿ ಟಿವಿ ಖರೀದಿಸುವುದಾಗಿ ಹೇಳಿದ್ದರೆ ಮತ್ತೆ ಕೆಲವರು ಟಿವಿ ಹಾಳಾಗಿದ್ದರಿಂದ ಉಂಟಾದ ನಷ್ಟ 5 ಸಾವಿರ ಪೌಂಡ್ ಗಳನ್ನು ಗ್ರಾಹಕನಿಂದ ವಸೂಲಿ ಮಾಡಲಾಯಿತ್ತೇ ಎಂಬ ಪ್ರಶ್ನೆ ಮುಂದಿಟ್ಟಿದ್ದಾರೆ.