ಚತ್ತೀಸ್ ಗಢದಲ್ಲಿ ಬಿಜೆಪಿ ಮುಖಂಡನ ಪುತ್ರನೊಬ್ಬ ಚಲಿಸುತ್ತಿರುವ ಕಾರ್ ನಲ್ಲೇ ಮಹಿಳೆ ಮೇಲೆ ಅತ್ಯಾಚಾರವೆಸಗಿದ್ದಾನೆ. ಕಳೆದ ಮಂಗಳವಾರ ಈ ಕೃತ್ಯ ನಡೆದಿದೆ, ರಾಜಧಾನಿ ರಾಯ್ಪುರದಿಂದ 75 ಕಿಮೀ ದೂರದಲ್ಲಿರುವ ಮಹಾಸಮುಂದ್ ಜಿಲ್ಲೆಯಲ್ಲಿ 36 ವರ್ಷದ ಮಹಿಳೆ ಮೇಲೆ ಪ್ರಿನ್ಸ್ ಸಲುಜಾ ಮತ್ತು ಆತನ ಸ್ನೇಹಿತರು ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ.
ಘಟನೆ ಬಳಿಕ ಪ್ರಿನ್ಸ್ ತಲೆಮರೆಸಿಕೊಂಡಿದ್ದು, ಆತನ ಸ್ನೇಹಿತರು ಸೆರೆ ಸಿಕ್ಕಿದ್ದಾರೆ. ಮಂಗಳವಾರ ರಾತ್ರಿ ಮಹಿಳೆಯನ್ನು ಅಪಹರಿಸಿದ್ದ ಪ್ರಿನ್ಸ್ ಸಲುಜಾ, ದೇವೇಂದ್ರ ಮತ್ತು ಫರಿದ್ ಅಲಿ ಆಕೆಯನ್ನು ಕಾರಿನಲ್ಲಿ ಕರೆದೊಯ್ದಿದ್ದಾರೆ. ಆಕೆಯ ಮೇಲೆ ಅತ್ಯಾಚಾರ ಮಾಡಿದ್ದಲ್ಲದೆ, ನೀಚ ಕೃತ್ಯವನ್ನು ವಿಡಿಯೋ ಮಾಡಿದ್ದಾರೆ. ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ರೆ ವಿಡಿಯೋ ಬಿಡುಗಡೆ ಮಾಡುವುದಾಗಿ ಬೆದರಿಸಿದ್ದಾರೆ. ಮರುದಿನ ದೌರ್ಜನ್ಯಕ್ಕೊಳಗಾದ ಮಹಿಳೆ ಪೊಲೀಸರಿಗೆ ದೂರು ನೀಡಿದ್ದು, ಉಳಿದವರನ್ನು ಬಂಧಿಸಿರುವ ಖಾಕಿ ಪಡೆ ಪ್ರಿನ್ಸ್ ಸಲುಜಾಗಾಗಿ ಶೋಧ ನಡೆಸುತ್ತಿದೆ.