ಸುದೀಪ್ ಕನ್ನಡದ ಬಹುಬೇಡಿಕೆಯ ನಟ. ಸಿನಿಮಾ ಹಾಗೂ ರಿಯಾಲಿಟಿ ಶೋಗಳಿಂದ ಅಪಾರ ಅಭಿಮಾನಿಗಳನ್ನು ಕಿಚ್ಚ ಸಂಪಾದಿಸಿದ್ದಾರೆ. ಕೇವಲ ನಟನೆ ಮಾತ್ರ ಅವರ ಹವ್ಯಾಸ ಎಂದುಕೊಳ್ಬೇಡಿ, ಫೋಟೋಗ್ರಫಿ ಕೂಡ ಅವರಿಗಿಷ್ಟ. ಶೂಟಿಂಗ್ ಇಲ್ಲದ ಬಿಡುವಿನ ಸಮಯದಲ್ಲೆಲ್ಲ ಸುದೀಪ್ ಫೋಟೋಗ್ರಫಿಯಲ್ಲಿ ಬ್ಯುಸಿಯಾಗಿ ಬಿಡ್ತಾರೆ.
ಸುಂದರ ಫೋಟೋಗಳನ್ನು ಕ್ಲಿಕ್ಕಿಸುವುದು ಅಂದ್ರೆ ಸುದೀಪ್ ಗೆ ಎಲ್ಲಿಲ್ಲದ ಪ್ರೀತಿ. ಬೆಂಗಳೂರು, ಕಾಶ್ಮೀರ, ಸ್ವಿಜ್ಜರ್ಲೆಂಡ್ ಹೀಗೆ ವಿಶ್ವದ ನಾನಾ ಭಾಗಗಳ ವಿಹಂಗಮ ನೋಟವನ್ನೆಲ್ಲ ಸುದೀಪ್ ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ. ಅದನ್ನೆಲ್ಲ ಫೋಟೋ ಶೇರಿಂಗ್ ಆ್ಯಪ್ ಒಂದರಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ಹೊಸ ಹವ್ಯಾಸ ಯಾವಾಗಿನಿಂದ ಶುರು ಅಂತ ಕೇಳಿದ್ರೆ, ಇದು ನನ್ನ ವೈಯಕ್ತಿಕ ಸಂಗ್ರಹ ಎನ್ನುತ್ತಾರೆ ಸುದೀಪ್. ನಮ್ಮ ಸುತ್ತ ಇಷ್ಟೊಂದು ತಂತ್ರಜ್ಞಾನ ಲಭ್ಯವಿರುವಾಗ ಕ್ಯಾಮರಾ ಮತ್ತು ಎಡಿಟಿಂಗ್ ಸಾಫ್ಟ್ ವೇರ್ ನೊಂದಿಗೆ ಪ್ರಯೋಗ ಮಾಡುವುದು ಖುಷಿ ಕೊಡುತ್ತದೆ ಅನ್ನೋದು ಅವರ ಅಭಿಪ್ರಾಯ. ಸುದೀಪ್ ಕ್ಯಾಮರಾದಲ್ಲಿ ಇನ್ನಷ್ಟು ಅದ್ಭುತ ಚಿತ್ರಗಳು ಸೆರೆಯಾಗಲಿ ಎನ್ನುತ್ತಾರೆ ಅಭಿಮಾನಿಗಳು.