ವಂಚನೆಯನ್ನೇ ಕಾಯಕವನ್ನಾಗಿಸಿಕೊಂಡಿದ್ದ ವ್ಯಕ್ತಿಯೊಬ್ಬ ತಾನು ಉನ್ನತ ಸರ್ಕಾರಿ ಅಧಿಕಾರಿಯಾಗಿದ್ದು, ಇನ್ನೂ ಅವಿವಾಹಿತನೆಂದು ಹೇಳಿ ಅನಿವಾಸಿ ಭಾರತೀಯ ವಿಚ್ಚೇದಿತ ಮಹಿಳೆಯನ್ನು ವಿವಾಹವಾಗಿದ್ದಲ್ಲದೇ ಆಕೆಗೆ ವಂಚಿಸಿ 20 ಲಕ್ಷ ರೂ. ಪಡೆದು ಭಾರತಕ್ಕೆ ಬಂದಿದ್ದು, ಇದೀಗ ಪೊಲೀಸರಿಂದ ಬಂಧನಕ್ಕೊಳಗಾಗಿದ್ದಾನೆ.
ಗುಂಟೂರಿನ 40 ವರ್ಷದ ವೆಂಕಟರತ್ನ ರೆಡ್ಡಿ ಬಂಧಿತನಾದವನಾಗಿದ್ದು, ಈತನಿಂದ ಕಾರು ಹಾಗೂ ಹಣವನ್ನು ವಶಕ್ಕೆ ಪಡೆಯಲಾಗಿದೆ. ಈತ ವೈವಾಹಿಕ ವೆಬ್ ಸೈಟ್ ನಲ್ಲಿ ತಾನು ಅವಿವಾಹಿತನೆಂದು ಹೇಳಿಕೊಂಡಿದ್ದು, ತನ್ನನ್ನು ಸಂಪರ್ಕಿಸಿದ ಅನಿವಾಸಿ ಭಾರತೀಯ ಮಹಿಳೆಯ ಕುಟುಂಬಕ್ಕೆ ಉನ್ನತ ಹುದ್ದೆಯಲ್ಲಿರುವುದಾಗಿ ಸುಳ್ಳು ಹೇಳಿದ್ದ.
ಬಳಿಕ ಈತನ ವಿವಾಹ ಮಹಿಳೆಯೊಂದಿಗೆ ನೆರವೇರಿದ್ದು, ಕೆಲ ದಿನಗಳ ಕಾಲ ಅಮೆರಿಕಾದಲ್ಲಿದ್ದ ಆತ, 20 ಲಕ್ಷ ರೂ. ಗಳನ್ನು ಪಡೆದು ಭಾರತಕ್ಕೆ ವಾಪಾಸ್ ಬಂದಿದ್ದ. ಮಹಿಳೆಯ ಕುಟುಂಬದವರಿಗೆ ಈತನ ಕುರಿತು ಅನುಮಾನ ಬಂದಿದ್ದು, ಗೂಗಲ್ ನಲ್ಲಿ ವಿವರ ಜಾಲಾಡಿದಾಗ ಜಾತಕ ಬಯಲಾಗಿದೆ. ಕಾರು ಕಳ್ಳತನ ಸೇರಿದಂತೆ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಈತ, 2009 ರಲ್ಲಿ ತಾನು ರೆವಿನ್ಯೂ ಅಧಿಕಾರಿ ಎಂದು ಹೇಳಿ ಹೈದ್ರಾಬಾದ್ ನ ಚಿತ್ರ ನಿರ್ಮಾಪಕರೊಬ್ಬರಿಂದ 12 ಲಕ್ಷ ರೂ. ವಸೂಲಿ ಮಾಡಲು ಯತ್ನಿಸಿದ್ದ.
ವಿಶಾಖಪಟ್ಟಣಂ ನಲ್ಲಿ ಪಾಸ್ ಪೋರ್ಟ್ ಪಡೆದು ಬ್ಯುಸಿನೆಸ್ ವೀಸಾ ಮೇಲೆ ಅಮೆರಿಕಾಕ್ಕೆ ತೆರಳಿ ಮಹಿಳೆಯನ್ನು ವಿವಾಹವಾಗಿದ್ದ. ಈತನ ವಿರುದ್ದ ಹಲವಾರು ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದರೂ ಪಾಸ್ ಪೋರ್ಟ್ ಸಿಕ್ಕಿದ್ದು ಹೇಗೆ ಎಂಬ ಪ್ರಶ್ನೆ ಈಗ ಮೂಡಿದೆ. ವಂಚನೆಗೊಳಗಾದ ಅನಿವಾಸಿ ಭಾರತೀಯ ಮಹಿಳೆ ಪರವಾಗಿ ಸಂಬಂಧಿಯೊಬ್ಬರು ಅಕ್ಟೋಬರ್ 10 ರಂದು ದೂರು ದಾಖಲಿಸಿದ್ದು, ಶನಿವಾರ ಈತನ ಬಂಧನವಾಗಿದೆ.