ಗೋವಾದಲ್ಲಿ ನಡೆಯುತ್ತಿರುವ ಬ್ರಿಕ್ಸ್ ರಾಷ್ಟ್ರಗಳ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಆಗಮಿಸಿದ್ದು, ಅವರನ್ನು ಭೇಟಿಯಾದ ಪ್ರಧಾನಿ ನರೇಂದ್ರ ಮೋದಿ ಮಾತುಕತೆ ನಡೆಸಿದ್ದಾರೆ.
ರಕ್ಷಣೆ ಕುರಿತ ಹಲವು ಒಪ್ಪಂದಗಳಿಗೆ ಭಾರತ ಮತ್ತು ರಷ್ಯಾ ನಡುವೆ ಒಡಂಬಡಿಕೆ ಮೂಡಲಿದೆ ಎನ್ನಲಾಗಿದ್ದು, ಹೀಗಾಗಿ ಉಭಯ ನಾಯಕರ ಭೇಟಿ ಮಹತ್ವ ಪಡೆದಿದೆ. ಜೊತೆಗೆ ಭಾರತದ ನೆರೆ ರಾಷ್ಟ್ರ ಪಾಕಿಸ್ತಾನ, ಭಯೋತ್ಪಾದಕ ಚಟುವಟಿಕೆಗಳನ್ನು ಬೆಂಬಲಿಸುತ್ತಿರುವ ವಿಚಾರ ಕೂಡ ಶೃಂಗಸಭೆಯಲ್ಲಿ ಪ್ರಸ್ತಾಪವಾಗಲಿದೆ.
ಬ್ರೆಜಿಲ್, ರಷ್ಯಾ, ಭಾರತ, ಚೀನಾ ಹಾಗೂ ದಕ್ಷಿಣ ಆಫ್ರಿಕಾ ರಾಷ್ಟ್ರಗಳ ಮುಖ್ಯಸ್ಥರು ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದು, ಗೋವಾದ ಪಣಜಿಯಲ್ಲಿ ಭಾರೀ ಬಿಗಿ ಭದ್ರತೆಯನ್ನು ಏರ್ಪಡಿಸಲಾಗಿದೆ. ಸದಸ್ಯ ರಾಷ್ಟ್ರಗಳ ಆರ್ಥಿಕತೆ, ಪ್ರವಾಸೋದ್ಯಮ, ಶಿಕ್ಷಣ, ಕ್ರೀಡೆ, ರಕ್ಷಣೆ ಮೊದಲಾದ ವಿಷಯಗಳ ಕುರಿತಾಗಿ ಪರಸ್ಪರ ಸಹಕಾರ ನೀಡುವ ಸಂಬಂಧ ಸಮಾಲೋಚನೆ ನಡೆಯಲಿದೆ.