ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಬಿಗ್ ಬಾಸ್’ ಸೀಸನ್ 4 ರಲ್ಲಿ ಮೊದಲನೇ ವಾರವೇ ಮನೆಯಲ್ಲಿ ಕಾವೇರಿದ ಕಲಹಕ್ಕೆ ಕಾರಣವಾಗಿದೆ.
ಹೆಸರಲ್ಲೇ ಕಿರಿಕ್ ಇದ್ದರೂ, ಒಳ್ಳೆ ಹುಡುಗನೆನಿಸಿಕೊಂಡಿರುವ ಕೀರ್ತಿ ಹಾಗೂ ನಾನು ಒಳ್ಳೆ ಹುಡುಗ ಎಂದು ಪದೇ ಪದೇ ಹೇಳುವ ಪ್ರಥಮ್ ನಡುವೆ ಜಗಳವಾಗಿದ್ದು, ಮನೆಯ ಸದಸ್ಯರು ಸಮಾಧಾನಪಡಿಸಿದ್ದಾರೆ.
ಮನೆಯ ಸದಸ್ಯರೆಲ್ಲಾ ಒಂದು, ತಾನೊಬ್ಬ ಮಾತ್ರ ಬೇರೆ ಎಂದುಕೊಂಡಿರುವ ಪ್ರಥಮ್ ಹಾಗೂ ಕ್ಯಾಪ್ಟನ್ ಕೀರ್ತಿ ನಡುವೆ ಒಂದು ಹಂತದಲ್ಲಿ ಮಾತಿನ ಸಮರವೇ ನಡೆದಿದೆ.
ಅಡುಗೆ ಮಾಡುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಅನ್ನ ಕೆಳಗೆ ಚೆಲ್ಲಿದ್ದು, ಅದನ್ನು ಪ್ರಥಮ್ ಕ್ಲೀನ್ ಮಾಡಿದ್ದಾರೆ. ಆಗ ವಾಣಿಶ್ರೀ ಅಲ್ಲಿಗೆ ಬಂದಿದ್ದು, ಚಪ್ಪಲಿ ಹಾಕಿಕೊಂಡು ಬರಬೇಡಿ ಎಂದು ಪ್ರಥಮ್ ಏರಿದ ಧ್ವನಿಯಲ್ಲಿ ಹೇಳಿದ್ದಾರೆ.
ಆಗ ಕೀರ್ತಿ ಮತ್ತು ಪ್ರಥಮ್ ನಡುವೆ ಮಾತಿಗೆ ಮಾತು ಬೆಳೆದಿದೆ. ವಾಣಿಶ್ರೀ, ಮಾಳವಿಕಾ ಮೊದಲಾದವರು ಸಮಾಧಾನಪಡಿಸಿದರೂ, ಪ್ರಥಮ್ ಕೇಳುವ ಸ್ಥಿತಿಯಲ್ಲಿರಲಿಲ್ಲ. ಕೀರ್ತಿ ಮತ್ತು ಪ್ರಥಮ್ ನಡುವೆ ಒಂದು ಹಂತದಲ್ಲಿ ದೊಡ್ಡದಾಗಿ ಜಗಳವೇ ನಡೆಯಿತು.
ಆಗ ಕ್ಯಾಪ್ಟನ್ ಗೆ ಎಲ್ಲರೂ ಸಾಥ್ ಕೊಡ್ತಾರೆ ಎಂದು ಪ್ರಥಮ್ ಕ್ಯಾಮೆರಾ ಎದುರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದಾದ ನಂತರ ಸೆಲ್ ಬಳಿ ಮತ್ತೊಮ್ಮೆ ಪ್ರಥಮ್ ಮತ್ತು ಕೀರ್ತಿ ನಡುವೆ ಮಾತಿಗೆ ಮಾತು ಬೆಳೆದು, ಕೀರ್ತಿ ಮೈಕ್ ಬಳಸದಿರಲು ತೀರ್ಮಾನ ಕೈಗೊಂಡರು.
ನಂತರದಲ್ಲಿ ಮೋಹನ್ ಸಮಾಧಾನದಿಂದ ಕೀರ್ತಿಯೊಂದಿಗೆ ಮಾತನಾಡಿ, ಮೈಕ್ ಬಳಸುವಂತೆ ತಿಳಿಹೇಳಿ, ಅವರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅದರೊಂದಿಗೆ ಮೋಹನ್, ನಿನ್ನ ಇಮೇಜ್ ಹಾಳು ಮಾಡಿಕೊಳ್ಳಬೇಡ. ಜೋಕರ್ ರೀತಿ ವರ್ತಿಸಬೇಡ ಎಂದು ಪ್ರಥಮ್ ಗೆ ಸಲಹೆ ನೀಡಿದ್ದು, ಅವರ ಸಲಹೆಯನ್ನು ಸ್ವೀಕರಿಸುವುದಾಗಿ ಪ್ರಥಮ್ ಹೇಳಿದ್ದಾರೆ.