ಅನಾರೋಗ್ಯಕ್ಕೊಳಗಾಗಿರುವ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ, ಸೆಪ್ಟೆಂಬರ್ 22 ರಿಂದ ಚೆನ್ನೈನ ಅಪೋಲೊ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಆರೋಗ್ಯ ಸ್ಥಿತಿ ಚೇತರಿಸಿಕೊಳ್ಳುತ್ತಿದ್ದರೂ ಊಹಾಪೋಹಗಳನ್ನು ಹರಿಬಿಟ್ಟ ಕಾರಣಕ್ಕೆ ಹಲವರನ್ನು ಪೊಲೀಸರು ಬಂಧಿಸಿದ್ದಾರೆ.
ಈ ಮಧ್ಯೆ ನಡೆದಿರುವ ಕುತೂಹಲಕರ ಬೆಳವಣಿಗೆಯೊಂದು ರಾಜಕೀಯ ವಲಯದಲ್ಲಿ ಆಶ್ಚರ್ಯಕ್ಕೆ ಕಾರಣವಾಗಿದೆ. ಜಯಲಲಿತಾರ ಆರೋಗ್ಯ ಕುರಿತು ಮಾಹಿತಿಯನ್ನು ನೀಡಬೇಕೆಂದು ಒತ್ತಾಯಿಸುತ್ತಿದ್ದ ಪ್ರಮುಖ ಪ್ರತಿ ಪಕ್ಷ ಡಿಎಂಕೆ ನಾಯಕ ಕರುಣಾನಿಧಿಯವರ ಪತ್ನಿ ರಜತಿ ಅಮ್ಮಾಳ್, ಗುರುವಾರದಂದು ಅಪೋಲೊ ಆಸ್ಪತ್ರೆಗೆ ಭೇಟಿ ನೀಡಿ ಜಯಲಲಿತಾರ ನಿಕಟವರ್ತಿ ಶಶಿಕಲಾರ ಜೊತೆ ಮಾತುಕತೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಕೆಲ ದಿನಗಳ ಹಿಂದಷ್ಟೇ ಕರುಣಾನಿಧಿಯವರ ಪುತ್ರ, ಡಿಎಂಕೆ ಶಾಸಕಾಂಗ ಪಕ್ಷದ ನಾಯಕ ಸ್ಟಾಲಿನ್, ಅಪೋಲೊ ಆಸ್ಪತ್ರೆಗೆ ಭೇಟಿ ನೀಡಿದ ಬಳಿಕ ಕರುಣಾನಿಧಿಯವರ ಪತ್ನಿ ರಜತಿ ಅಮ್ಮಾಳ್, ಆಸ್ಪತ್ರೆಗೆ ಭೇಟಿ ನೀಡಿರುವುದು ರಾಜಕೀಯ ವಲಯದಲ್ಲಿ ಸಂಚಲನವನ್ನುಂಟು ಮಾಡಿದೆ. ಎಐಎಡಿಎಂಕೆ ಹಾಗೂ ಡಿಎಂಕೆ ಪಕ್ಷಗಳು ಶಶಿಕಲಾ ಹಾಗೂ ರಜತಿ ಅಮ್ಮಾಳ್ ಅವರ ಭೇಟಿಯನ್ನು ಅಧಿಕೃತವಾಗಿ ಒಪ್ಪಿಕೊಂಡಿಲ್ಲವಾದರೂ ನಿರಾಕರಿಸಿಯೂ ಇಲ್ಲ ಎಂಬುದು ಗಮನಾರ್ಹ.