ಜರ್ಮನಿಯಲ್ಲಿ ಸಿಕ್ಕಿಬಿದ್ದಿದ್ದ ಸಿರಿಯಾದ ಶಂಕಿತ ಭಯೋತ್ಪಾದಕನೊಬ್ಬ ಪೊಲೀಸ್ ಕಸ್ಟಡಿಯಲ್ಲಿದ್ದಾಗಲೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಲೀಪ್ಜಿಗ್ ಜೈಲಿನಲ್ಲಿದ್ದ ಜಾಬೇರ್ ಅಲ್ಬಕ್ರ್ ಉಪವಾಸ ಕೂರಬಹುದು ಅಥವಾ ಆತ್ಮಹತ್ಯೆ ಮಾಡಿಕೊಳ್ಳಬಹುದು ಎಂಬ ಶಂಕೆ ಮೇಲೆ 24 ಗಂಟೆಗಳೂ ಕಣ್ಣಲ್ಲಿ ಕಣ್ಣಿಟ್ಟು ಕಾವಲು ಕಾಯಲಾಗುತ್ತಿತ್ತು. ಆದ್ರೂ ಪೊಲೀಸರ ಕಣ್ತಪ್ಪಿಸಿ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಜಾಬೇರ್ ಮನೆಯಲ್ಲಿ 100 ಗ್ರಾಂನಷ್ಟು ಸ್ಫೋಟಕ ಪತ್ತೆಯಾಗಿತ್ತು. ಆತ ಬಾಂಬ್ ತಯಾರಿಸುವುದು ಹೇಗೆ ಎಂಬ ಬಗ್ಗೆ ಆನ್ ಲೈನ್ ನಲ್ಲಿ ಹುಡುಕಾಟ ನಡೆಸಿದ್ದ. ಜಿಹಾದ್ ಶಸ್ತ್ರಾಸ್ತ್ರಗಳಿಗಾಗಿಯೂ ಶೋಧ ನಡೆಸಿದ್ದ. ಜಾಬೇರ್ ನನ್ನು ಹಿಡಿಯಲು ಪೊಲೀಸರು ಶತಪ್ರಯತ್ನ ನಡೆಸಿದ್ದರು, ಎರಡು ದಿನ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿದ್ದ ಆತ ಕೊನೆಗೂ ಸಿಕ್ಕಿಬಿದ್ದಿದ್ದ.
ಆತನನ್ನು ಗುರುತು ಹಿಡಿದಿದ್ದ ಮೂವರು ಸಿರಿಯಾ ನಾಗರೀಕರನ್ನು ಪೊಲೀಸರು ಅಸ್ತ್ರವಾಗಿ ಬಳಸಿದ್ದಾರೆ. ಜಾಬೇರ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಆಶ್ರಯ ಕೋರಿ ಅವರ ಬಳಿ ಬಂದಿದ್ದ. ಆಗ ಮೂವರೂ ಸೇರಿ ಅವನನ್ನು ಕಟ್ಟಿಹಾಕಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.