5 ವರ್ಷಗಳ ಕಾಲ ನಡೆದ ಮುಂಬೈನ ವಾಂಖೇಡೆ ಮೈದಾನ ಸಮರಕ್ಕೆ ಕೊನೆಗೂ ಬ್ರೇಕ್ ಬಿದ್ದಿದೆ. 2012 ರಲ್ಲಿ ನಡೆದ ಈ ಪ್ರಕರಣದಲ್ಲಿ ನಟ ಶಾರೂಕ್ ಖಾನ್ ಮದ್ಯ ಸೇವನೆ ಮಾಡಿರಲಿಲ್ಲ, ಹಾಗೂ ಅಪ್ರಾಪ್ತರೆದುರು ಕೆಟ್ಟ ಪದ ಬಳಕೆ ಮಾಡಿಲ್ಲ ಎಂಬ ನಿರ್ಧಾರಕ್ಕೆ ಮುಂಬೈ ಪೊಲೀಸರು ಬಂದಿದ್ದಾರೆ.
ಮುಂಬೈನ ವಾಂಖೆಡೆ ಮೈದಾನದಲ್ಲಿ ಐಪಿಎಲ್ ಪಂದ್ಯ ನಡೆಯುತ್ತಿತ್ತು. ತಮ್ಮ ಮಕ್ಕಳಿಗೆ ಮೈದಾನದಲ್ಲಿ ಆಡಲು ಅವಕಾಶ ನೀಡಲಿಲ್ಲ ಎಂಬ ಕಾರಣಕ್ಕೆ ಶಾರೂಕ್, ಭದ್ರತಾ ಸಿಬ್ಬಂದಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆಂಬ ಆರೋಪವಿದೆ.
ಶಾರೂಕ್ ವಿರುದ್ಧ ಸಾಮಾಜಿಕ ಕಾರ್ಯಕರ್ತ ಅಮಿತ್ ಮಹಾರಾಷ್ಟ್ರ ಸ್ಟೇಟ್ ಕಮೀಷನರ್ ಗೆ ದೂರು ನೀಡಿದ್ದರು. ಕಮೀಷನರ್ ನಿರ್ದೇಶನದ ಬಳಿಕವೂ ಮುಂಬೈ ಪೊಲೀಸರು ಶಾರೂಕ್ ವಿರುದ್ಧ ಎಫ್ಐಆರ್ ದಾಖಲಿಸಿರಲಿಲ್ಲ. ನಂತರ ಅಮಿತ್ ಮುಂಬೈ ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ದೂರು ನೀಡಿದ್ರು.
ಈ ಬಗ್ಗೆ ತನಿಖೆ ನಡೆಸುವಂತೆ ಮರೀನ್ ಡ್ರೈವ್ ಪೊಲೀಸರಿಗೆ ಕೋರ್ಟ್ ಸೂಚನೆ ನೀಡಿತ್ತು. ಬಳಿಕ ಮುಂಬೈ ಕ್ರಿಕೆಟ್ ಅಸೋಸಿಯೇಶನ್ ಶಾರೂಕ್ ಗೆ 5 ವರ್ಷ ವಾಂಖೇಡೆ ಪ್ರವೇಶಿಸದಂತೆ ನಿರ್ಬಂಧ ಹೇರಿತ್ತು. ಕಳೆದ ಜೂನ್ 23ರಂದು ಶಾರೂಕ್ ತಮ್ಮ ಹೇಳಿಕೆ ದಾಖಲಿಸಿದ್ರು. ಪಂದ್ಯದ ಬಳಿಕ ಸಂಭ್ರಮಾಚರಣೆ ಮಾಡುತ್ತಿದ್ದ ತಮ್ಮ ಮಕ್ಕಳನ್ನು ಭದ್ರತಾ ಸಿಬ್ಬಂದಿ ನಿಂದಿಸಿದ್ದರಿಂದ ಮಾತಿನ ಚಕಮಕಿ ನಡೀತು. ಆ ಸಮಯದಲ್ಲಿ ತಾವು ಮದ್ಯಪಾನ ಮಾಡಿರಲಿಲ್ಲ, ಕೆಟ್ಟ ಪದ ಬಳಕೆ ಮಾಡಿಲ್ಲ ಅಂತಾ ಶಾರೂಕ್ ಹೇಳಿದ್ದಾರೆ. ಇಂಟರ್ನೆಟ್ ನಲ್ಲಿ ಅಪ್ಲೋಡ್ ಆಗಿರುವ ದೃಶ್ಯ ತಮ್ಮದಲ್ಲ ಎಂದಿದ್ದಾರೆ. ಶಾರೂಕ್ ಹೇಳಿಕೆಯನ್ನು ಪೊಲೀಸರು ಕೂಡ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.