ತೆಂಗಿನ ಮರ ಏರಿ ಎಳನೀರು ಕೀಳಲು ಮುಂದಾಗಿದ್ದ ಬಾಲಕನೊಬ್ಬನನ್ನು ಹಿಡಿದ ಮೂವರು ಯುವಕರು, ಆತನಿಗೆ ಬುದ್ದಿ ಕಲಿಸಲು ಮಾಡಿರುವ ವಿಕೃತ ಕೆಲಸ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ಕಾರಣಕ್ಕಾಗಿ ಯುವಕರು ಈಗ ಫಜೀತಿಗೆ ಸಿಲುಕಿದ್ದಾರೆ.
ಕಳೆದ ವಾರ ಹಾಸನ ಜಿಲ್ಲೆ ಅರಸಿಕೆರೆ ಹೊರ ವಲಯದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಬಾಲಕನನ್ನು ಹಿಡಿದ ಯುವಕರು, ಆತನಿಗೆ ಜಾಲಿ ಮುಳ್ಳಿನ ಕೋಲಿನಿಂದ ಹೊಡೆದಿದ್ದಾರೆ. ಬಾಲಕ ತನ್ನನ್ನು ಬಿಟ್ಟು ಬಿಡುವಂತೆ ಗೋಗರೆದರೂ ಮನಕರಗದ ಯುವಕರು, ಆತನಿಗೆ ಇರುವೆ ಗೂಡಿನ ಮೇಲೆ ನಿಲ್ಲಿಸಿ ವಿಕೃತಾನಂದ ಮೆರೆದಿದ್ದಾರೆ. ಸಾಲದ್ದಕ್ಕೆ ಈ ದೃಶ್ಯಗಳನ್ನೆಲ್ಲಾ ತಮ್ಮ ಮೊಬೈಲ್ ನಲ್ಲಿ ಚಿತ್ರೀಕರಿಸಿಕೊಂಡು ಸಾಮಾಜಿಕ ಜಾಲತಾಣ ವಾಟ್ಸಾಪ್ ನಲ್ಲಿ ಹಾಕಿದ್ದಾರೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ತಮ್ಮ ಮಗನಿಗೆ ಯುವಕರು ಚಿತ್ರಹಿಂಸೆ ಕೊಟ್ಟ ವಿಚಾರ ಬಾಲಕನ ತಂದೆಗೂ ತಲುಪಿದೆ. ಇದೀಗ ಅವರು, ಯುವಕರ ವಿರುದ್ದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆನ್ನಲಾಗಿದ್ದು, ಯುವಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲು ಪೊಲೀಸರು ಮುಂದಾಗಿದ್ದಾರೆ. ಬಾಲಕನಿಗೆ ಬುದ್ದಿ ಕಲಿಸಲು ಮುಂದಾದ ಯುವಕರೀಗ ಬಂಧನದ ಭೀತಿ ಎದುರಿಸುತ್ತಿದ್ದು, ರಾಜಿ ಮಾಡಿಸಲು ಕೆಲವರು ಮುಂದಾಗಿದ್ದಾರೆಂದು ತಿಳಿದುಬಂದಿದೆ.