ಬೆಂಗಳೂರು: ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ತಡೆ ನೀಡಿರುವ ಸುಪ್ರೀಂ ಕೋರ್ಟ್, ಅಧ್ಯಯನ ತಂಡ ರಚಿಸಿದ್ದು, ಪ್ರತಿದಿನ 2,000 ಕ್ಯೂಸೆಕ್ ನಂತೆ ಅಕ್ಟೋಬರ್ 7 ರಿಂದ 18 ರ ವರೆಗೆ ನೀರು ಹರಿಸಲು ಆದೇಶ ನೀಡಿದೆ.
ಈ ಆದೇಶ ರಾಜ್ಯದ ಪಾಲಿಗೆ ಸಮಾಧಾನ ತಂದಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದ್ದು, ಕಾವೇರಿಗಾಗಿ ರಾಜ್ಯದ ಹಿತ ಕಾಯ್ದ ಎಲ್ಲರಿಗೂ ಮುಖ್ಯಮಂತ್ರಿ ಸಿದ್ಧರಾಮಯ್ಯ ಕೃತಜ್ಞತೆ ಸಲ್ಲಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ರಾಜ್ಯದ ಕೇಂದ್ರ ಸಚಿವರು ಸೇರಿದಂತೆ ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ. ರಾಜ್ಯ ಸಂಕಷ್ಟದ ಸಂದರ್ಭದಲ್ಲಿ ಎಲ್ಲಾ ಪಕ್ಷಗಳು ಒಗ್ಗಟ್ಟು ಪ್ರದರ್ಶಿಸಿವೆ. ಸರ್ಕಾರದ ಜೊತೆಗೆ ನಿಂತಿವೆ ಎಂದು ಸಿ.ಎಂ. ಕೃತಜ್ಞತೆ ಸಲ್ಲಿಸಿದ್ದಾರೆ.
ಕಾವೇರಿ ನದಿ ನೀರಿನ ವಿಚಾರವಾಗಿ ಸೆಪ್ಟಂಬರ್ 2 ರಿಂದ ಅಕ್ಟೋಬರ್ 2 ರ ವರೆಗೆ 5 ಬಾರಿ ಸರ್ವಪಕ್ಷ ಸಭೆ ಕರೆಯಲಾಗಿದೆ. 10 ದಿನಗಳಲ್ಲಿ 2 ಬಾರಿ ವಿಶೇಷ ಅಧಿವೇಶನ ನಡೆಸಲಾಗಿದೆ. ರಾಜ್ಯದ ಹಿತ ದೃಷ್ಠಿಯಿಂದ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದ್ದಾರೆ.