ಬೆಂಗಳೂರು: ಮನೆ ಮುಂದೆ ನಿಲ್ಲಿಸಿದ್ದ ಕಾರ್ ಗಳಿಗೆ, ದುಷ್ಕರ್ಮಿಗಳು ಬೆಂಕಿ ಹಚ್ಚುವ ಪ್ರಕರಣ ಕೆಲ ದಿನಗಳಿಂದ ಕಡಿಮೆಯಾಗಿತ್ತು. ಬೆಂಗಳೂರಿನಲ್ಲಿ ಇಂತಹ ಪ್ರಕರಣ ಹೆಚ್ಚು ವರದಿಯಾಗಿದ್ದರಿಂದ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರು.
ಮನೆ ಮುಂದೆ ನಿಲ್ಲಿಸಿದ್ದ ಫಾರ್ಚೂನರ್ ಕಾರಿಗೆ ತಡರಾತ್ರಿ ಇಬ್ಬರು ದುಷ್ಕರ್ಮಿಗಳು ಬೆಂಕಿ ಹಚ್ಚಿದ ಘಟನೆ ಬೆಂಗಳೂರಿನ ಮಹಾಲಕ್ಷ್ಮಿ ಲೇ ಔಟ್ ನಲ್ಲಿ ನಡೆದಿದೆ. ನರಸಿಂಹ ಮೂರ್ತಿ ಎಂಬುವವರಿಗೆ ಸೇರಿದ ಕಾರ್ ಇದಾಗಿದ್ದು, ರಾಜಕೀಯ ದ್ವೇಷದಿಂದ ಸಚಿವರೊಬ್ಬರ ಬೆಂಬಲಿಗರು ಈ ಕೃತ್ಯ ಎಸಗಿದ್ದಾರೆ ಎಂದು ನರಸಿಂಹ ಮೂರ್ತಿ ಆರೋಪಿಸಿದ್ದಾರೆ. ಇಬ್ಬರು ದುಷ್ಕರ್ಮಿಗಳು ಕಾರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚುವ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಫಾರ್ಚೂನರ್ ಕಾರು ಬೆಂಕಿಗೆ ಸಂಪೂರ್ಣ ಸುಟ್ಟು ಹೋಗಿದೆ. ಸ್ಥಳಕ್ಕೆ ಆಗಮಿಸಿದ ಮಹಾಲಕ್ಷ್ಮಿ ಲೇಔಟ್ ಠಾಣೆ ಪೊಲೀಸರು, ನರಸಿಂಹ ಮೂರ್ತಿ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.