ದೆಹಲಿಯ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರಿಗೆ ಸುಪ್ರೀಂ ಕೋರ್ಟ್ 25,000 ರೂಪಾಯಿ ದಂಡ ವಿಧಿಸಿದೆ. ಮಹಾಮಾರಿ ಚಿಕೂನ್ ಗುನ್ಯ ಹಾಗೂ ಡೆಂಘಿ ನಿಯಂತ್ರಣಕ್ಕೆ ಸಹಕರಿಸದ ಸರ್ಕಾರಿ ಅಧಿಕಾರಿಗಳ ಪಟ್ಟಿಯನ್ನು ಸಲ್ಲಿಸದ ಹಿನ್ನೆಲೆಯಲ್ಲಿ ಕೋಪಗೊಂಡ ಸುಪ್ರೀಂ ಕೋರ್ಟ್ ದಂಡ ಹಾಕಿದೆ.
ಕೋರ್ಟ್ ಆದೇಶದಂತೆ ಸತ್ಯೇಂದ್ರ ಜೈನ್ ಅಫಿಡವಿಡ್ ಕೂಡ ಸಲ್ಲಿಸಿರಲಿಲ್ಲ, ಜನರು ಸಾಯುತ್ತಿದ್ದಾರೆ. ಅಂಥದ್ರಲ್ಲಿ ನಿಮಗೆ 24 ಗಂಟೆಗಳು ಬೇಕೇ ಅಂತಾ ಕೋರ್ಟ್ ಅವರನ್ನು ತರಾಟೆಗೆ ತೆಗೆದುಕೊಂಡಿದೆ. ದೆಹಲಿಯಲ್ಲಿ 8000 ಕ್ಕೂ ಹೆಚ್ಚು ಚಿಕೂನ್ ಗುನ್ಯ ಮತ್ತು ಡೆಂಘಿ ಪ್ರಕರಣಗಳು ಪತ್ತೆಯಾಗಿವೆ. ಈ ಬಗ್ಗೆ ಸುಪ್ರೀಂ ಕೋರ್ಟ್ ಸುಮೋಟೋ ಕೇಸ್ ದಾಖಲಿಸಿಕೊಂಡಿತ್ತು.
ರೋಗ ನಿಯಂತ್ರಣಕ್ಕೆ ಸಹಕರಿಸುವ ಬದಲು ಅಧಿಕಾರಿಗಳು ಫೈಲ್ ಗಳನ್ನೆಲ್ಲ ಲೆಫ್ಟಿನೆಂಟ್ ಗವರ್ನರ್ ಗೆ ಕಳುಹಿಸುತ್ತಿದ್ದಾರೆಂದು ಆರೋಗ್ಯ ಸಚಿವರು ಆರೋಪ ಮಾಡಿದ್ದರು. ಆ ಎಲ್ಲ ಅಧಿಕಾರಿಗಳ ಹೆಸರು ತಿಳಿಸುವಂತೆ ಸುಪ್ರೀಂ ಕೋರ್ಟ್ ಸೂಚಿಸಿತ್ತು, ಆದ್ರೆ ಆರೋಗ್ಯ ಸಚಿವರು ಅಧಿಕಾರಿಗಳ ಪಟ್ಟಿ ಸಲ್ಲಿಸಿಲ್ಲ. ಸಚಿವರ ಬೇಜವಾಬ್ಧಾರಿ ವರ್ತನೆ ಬಗ್ಗೆ ಕಿಡಿಕಾರಿದ ಸುಪ್ರೀಂ ಕೋರ್ಟ್, ದೆಹಲಿಯನ್ನು ಸ್ವಚ್ಛವಾಗಿ, ರೋಗರಹಿತವಾಗಿಟ್ಟುಕೊಳ್ಳುವುದು ನಿಮ್ಮ ಕರ್ತವ್ಯ ಎಂದಿದೆ.