ಕೋಲ್ಕೊತಾ : ಭಾರತದಲ್ಲಿ ಕ್ರಿಕೆಟ್ ಪಂದ್ಯ ವೀಕ್ಷಣೆಯು ಮನರಂಜನೆ ನೀಡುತ್ತದೆ. ಕುಟುಂಬ ಸಮೇತ ಕ್ರೀಡಾಂಗಣಕ್ಕೆ ಆಗಮಿಸುವ ಜನರಿದ್ದಾರೆ ಎಂದು ಕ್ರಿಕೆಟಿಗ ವಿ.ವಿ.ಎಸ್. ಲಕ್ಷ್ಮಣ್ ಹೇಳಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಕ್ರಿಕೆಟ್ ಮನರಂಜನೆ ನೀಡುವ ಕಾರಣಕ್ಕೆ ಹೆಚ್ಚಿನವರು ಸಿನಿಮಾ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹೋದಂತೆ ಕ್ರೀಡಾಂಗಣಕ್ಕೆ ಬರುತ್ತಾರೆ. ಸ್ಪೋಟಕ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಅವರಂತಹ ಆಟಗಾರರು ಜನರನ್ನು ಆಕರ್ಷಿಸುತ್ತಾರೆ. ಟೆಸ್ಟ್, ಏಕದಿನ ಹಾಗೂ ಟಿ-20ಯಲ್ಲಿ ಆಡುವ ಕೊಹ್ಲಿ ಅವರನ್ನು ಮಕ್ಕಳು ಅನುಕರಿಸುವುದರಿಂದ ಕ್ರಿಕೆಟ್ ಬೆಳೆಯುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಭಾರತ ಕ್ರಿಕೆಟ್ ತಂಡದ ಪ್ರಧಾನ ಕೋಚ್ ಅನಿಲ್ ಕುಂಬ್ಳೆ ಮಾತನಾಡಿ, ಟೆಸ್ಟ್ ಕ್ರಿಕೆಟ್ ಜನಪ್ರಿಯತೆ ಕಳೆದುಕೊಳ್ಳುವುದಿಲ್ಲ. ಏಕದಿನ ಪಂದ್ಯ ಆರಂಭವಾದ ಸಂದರ್ಭದಲ್ಲಿ ಟೆಸ್ಟ್ ಗೆ ಭವಿಷ್ಯವಿಲ್ಲ ಎಂದೆಲ್ಲಾ ಹೇಳಲಾಗಿತ್ತು. ಆದರೆ, ಇಷ್ಟು ವರ್ಷಗಳ ನಂತರವೂ ಟೆಸ್ಟ್ ಕ್ರಿಕೆಟ್ ಉಳಿದಿದೆ ಎಂದು ಹೇಳಿದ್ದಾರೆ.