ಶಿವಮೊಗ್ಗ: ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ, ಪರಿಚಯವಾದ ಯುವತಿಯನ್ನು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು, ಮಹಿಳಾ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸಿದ್ಧಾರ್ಥ್, ನಾಗರಾಜ್, ವಿನಯ್ ಹಾಗೂ ಕಿರಣ್ ಬಂಧಿತ ಆರೋಪಿಗಳು. ಶಿವಮೊಗ್ಗದ ಯುವತಿಯನ್ನು ಫೇಸ್ ಬುಕ್ ಮೂಲಕ ಪರಿಚಯ ಮಾಡಿಕೊಂಡ ಸಿದ್ಧಾರ್ಥ್, ಪ್ರೀತಿಸುವ ನಾಟಕವಾಡಿ ಯುವತಿಯ ನಗ್ನ ಚಿತ್ರಗಳನ್ನು ತೆಗೆದಿದ್ದಾನೆ. ಅವುಗಳನ್ನು ಮೊಬೈಲ್ ನಲ್ಲಿ ನೋಡಿದ ಸಿದ್ಧಾರ್ಥ್ ನ ಸ್ನೇಹಿತ ವಿನಯ್, ಯುವತಿಯನ್ನು ಪರಿಚಯಿಸಿಕೊಂಡು ಗೆಳೆತನ ಬೆಳೆಸಿದ್ದಾನೆ.
ತನ್ನ ಸ್ನೇಹಿತನಾಗಿರುವ ನಾಗರಾಜ ವಾಮಾಚಾರದ ಮೂಲಕ ಮೊಬೈಲ್ ನಲ್ಲಿರುವ ನಗ್ನ ಚಿತ್ರಗಳನ್ನು ತೆಗೆಯುತ್ತಾನೆ ಎಂದು ಹೇಳಿ ಯುವತಿಗೆ ನಾಗರಾಜನನ್ನು ಪರಿಚಯಿಸಿಕೊಟ್ಟಿದ್ದಾನೆ. ಯುವತಿಯನ್ನು ಪರಿಚಯಿಸಿಕೊಂಡ ನಾಗರಾಜ ಆಕೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿ ಗರ್ಭಿಣಿಯಾಗಲು ಕಾರಣವಾಗಿದ್ದಾನೆ.
ನಂತರದಲ್ಲಿ ನಾಗರಾಜ ಹಾಗೂ ಯುವತಿಯನ್ನು ಮದುವೆ ಮಾಡಿಸಲು ಕಿರಣ್ ಎಂಬಾತ ಸಹಕಾರ ನೀಡಿದ್ದಾನೆ. ಆದರೆ, ನಾಗರಾಜನಿಗೆ ಈ ಮೊದಲೇ ಮದುವೆಯಾಗಿ, 1 ಮಗು ಕೂಡ ಇರುವುದು ಗೊತ್ತಾಗಿದೆ.
ಇದರಿಂದ ಕಂಗಾಲಾದ ಯುವತಿ, ಪೋಷಕರ ನೆರವಿನಿಂದ ಮಹಿಳಾ ಠಾಣೆ ಪೊಲೀಸರಿಗೆ ದೂರು ನೀಡಿದ್ದು, ನಾಲ್ವರನ್ನು ಬಂಧಿಸಿರುವ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.