ನಕಲಿ ನೋಟುಗಳ ಚಲಾವಣೆಯಾಗುತ್ತಿರುವ ಸಾಕಷ್ಟು ಪ್ರಕರಣಗಳು ಬೆಳಕಿಗೆ ಬಂದಿವೆ. ನಕಲಿ ನೋಟು ತಯಾರಿಕಾ ಜಾಲವನ್ನು ಬೇಧಿಸಿರುವ ಪೊಲೀಸರು ಹಲವರನ್ನು ಬಂಧಿಸಿದ್ದರೂ ನಕಲಿ ನೋಟುಗಳ ಹಾವಳಿಗೆ ಕಡಿವಾಣ ಬಿದ್ದಿಲ್ಲ. ಕೆಲವೊಮ್ಮೆ ಎಟಿಎಂ ಯಂತ್ರಗಳಿಂದಲೂ ನಕಲಿ ನೋಟುಗಳು ಬಂದ ಉದಾಹರಣೆಗಳಿವೆ. ಇದೀಗ ಆಶ್ಚರ್ಯಕರ ಸುದ್ದಿಯೊಂದು ಹೊರ ಬಿದ್ದಿದೆ.
ನಕಲಿ ನೋಟುಗಳನ್ನು ಮಾತ್ರವಲ್ಲ 5 ರೂ. ಹಾಗೂ 10 ರೂ. ಗಳ ನಕಲಿ ಕಾಯಿನ್ ಗಳನ್ನು ಟಂಕಿಸುತ್ತಾರೆಂಬ ಮಾಹಿತಿ ಈಗ ಹೊರ ಬಿದ್ದಿದೆ. ನವದೆಹಲಿಯ ರೋಹಿಣಿ ಚೆಕ್ ಪೋಸ್ಟ್ ನಲ್ಲಿ ಪೊಲೀಸರು ತಪಾಸಣೆ ನಡೆಸುತ್ತಿದ್ದ ವೇಳೆ ಕಾರಿನಲ್ಲಿ ಹೋಗುತ್ತಿದ್ದ ರಾಜೇಶ್ ಕುಮಾರ್ ಎಂಬಾತ ಪೊಲೀಸರನ್ನು ಕಂಡು ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ.
ಆತನನ್ನು ಹಿಡಿದು ಕಾರನ್ನು ತಪಾಸಣೆಗೊಳಪಡಿಸಿದಾಗ ತಲಾ 100 ರಂತೆ 20 ಪಾಕೇಟ್ ಗಳಲ್ಲಿ ತುಂಬಿಡಲಾಗಿದ್ದ 5 ಹಾಗೂ 10 ರೂ. ಕಾಯಿನ್ ಗಳು ಪತ್ತೆಯಾಗಿವೆ. ಹೆಚ್ಚಿನ ವಿಚಾರಣೆ ನಡೆಸಿದ ಪೊಲೀಸರಿಗೆ ಅಚ್ಚರಿಯಾಗುವಂತೆ ಆತ, ದೆಹಲಿ ಹೊರ ವಲಯದ ಭಾವನಾ ಇಂಡಸ್ಟ್ರಿಯಲ್ ಏರಿಯಾದ ಫ್ಯಾಕ್ಟರಿಯೊಂದರಲ್ಲಿ ನಕಲಿ ಕಾಯಿನ್ ಗಳನ್ನು ಟಂಕಿಸುತ್ತಿರುವುದಾಗಿ ತಿಳಿಸಿದ್ದಾನೆ.
ಕೂಡಲೇ ಪೊಲೀಸರ ವಿಶೇಷ ತಂಡ ಫ್ಯಾಕ್ಟರಿ ಮೇಲೆ ದಾಳಿ ಮಾಡಿ ಕಾಯಿನ್ ತಯಾರಿಕಾ ಯಂತ್ರ ಸೇರಿದಂತೆ ನಕಲಿ ಕಾಯಿನ್ ತಯಾರಿಕೆಗೆ ಬಳಸುತ್ತಿದ್ದ ಕಚ್ಚಾ ಸಾಮಾಗ್ರಿಗಳನ್ನು ವಶಕ್ಕೆ ಪಡೆದಿದೆ. ರಾಜು ಮತ್ತು ಸೋನು ಎಂಬ ಇಬ್ಬರು ಖದೀಮರು, ನಕಲಿ ಕಾಯಿನ್ ತಯಾರಿಕೆ ಹಿಂದಿನ ಮಾಸ್ಟರ್ ಮೈಂಡ್ ಗಳೆಂದು ಹೇಳಲಾಗಿದ್ದು, ಅವರುಗಳ ಬಂಧನಕ್ಕೆ ಬಲೆ ಬೀಸಲಾಗಿದೆ.