ಕೇರಳ ರಾಜ್ಯ ಲಾಟರಿಯಲ್ಲಿ ಈ ಬಾರಿಯ ಓಣಂ ಬಂಪರ್ ಬಹುಮಾನ 8 ಕೋಟಿ ರೂಪಾಯಿ ವಿಜೇತರಾದ ಅದೃಷ್ಟವಂತರ್ಯಾರು ಎಂಬ ರಹಸ್ಯ ಕೊನೆಗೂ ಬಹಿರಂಗಗೊಂಡಿದೆ. ಡ್ರಾ ಆಗಿ ವಾರಗಳೇ ಕಳೆದರೂ ಬಂಪರ್ ವಿಜೇತರು ಬಹುಮಾನ ಪಡೆಯಲು ಮುಂದೆ ಬಾರದ ಕಾರಣ ಲಾಟರಿ ಟಿಕೇಟ್ ಖರೀದಿಸಿದ್ದವರು ಅದನ್ನು ಕಳೆದುಕೊಂಡಿರಬಹುದೆಂಬ ಊಹಾಪೋಹಕ್ಕೆ ಇದರಿಂದ ತೆರೆ ಬಿದ್ದಂತಾಗಿದೆ.
ತ್ರಿಶೂರ್ ಜಿಲ್ಲೆಯ ದ್ವಿಚಕ್ರ ವಾಹನಗಳ ಮೆಕಾನಿಕ್ ಗಣೇಶ್ 8 ಕೋಟಿ ರೂ. ವಿಜೇತನಾಗಿರುವ ಅದೃಷ್ಟವಂತನಾಗಿದ್ದು, ಸೋಮವಾರದಂದು ಬಹುಮಾನ ಪಡೆದುಕೊಳ್ಳುವ ಸಾಧ್ಯತೆಯಿದೆ. ಸೆಪ್ಟೆಂಬರ್ 23 ರಂದು ಗಣೇಶ್, ಹಬ್ಬಕ್ಕೆಂದು ತನ್ನ ಊರಿಗೆ ತೆರಳುವ ವೇಳೆ ಈ ಲಾಟರಿ ಟಿಕೇಟ್ ಖರೀದಿಸಿದ್ದು, ಹಬ್ಬದ ಬಳಿಕ ವಾಪಾಸ್ ತಾನು ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ಹೋಗುವಾಗ ಲಾಟರಿ ಟಿಕೇಟ್ ನ್ನು ಮನೆಯಲ್ಲೇ ಮರೆತು ಬಂದಿದ್ದ.
ನಂತರ ತನ್ನ ಕೆಲಸದಲ್ಲಿ ಗಣೇಶ್ ಬ್ಯುಸಿಯಾದ ಕಾರಣ ತಾನು ಖರೀದಿಸಿದ್ದ ಲಾಟರಿ ಟಿಕೇಟಿನ ವಿಚಾರವನ್ನೇ ಮರೆತುಬಿಟ್ಟಿದ್ದ. ಮತ್ತೊಮ್ಮೆ ಊರಿಗೆ ಹೋದ ವೇಳೆ ಲಾಟರಿ ಫಲಿತಾಂಶ ನೋಡಿದ ಗಣೇಶ್ ಗೆ ಅಚ್ಚರಿ ಕಾದಿತ್ತು. ಆತ ಖರೀದಿಸಿದ್ದ ಟಿಕೇಟ್ TC 788368 ಗೆ ಬಂಪರ್ ಬಹುಮಾನ 8 ಕೋಟಿ ರೂ. ಲಭಿಸಿತ್ತು. ಇದೀಗ ಗಣೇಶ್ ಹಣ ಪಡೆಯಲು ಮುಂದಾಗಿದ್ದು, ಇದರೊಂದಿಗೆ ಈ ಬಾರಿಯ 8 ಕೋಟಿ ರೂ. ಲಾಟರಿ ವಿಜೇತರ್ಯಾರು ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ.